ಶ್ರದ್ಧೆ,ಧೈರ್ಯ,ಭಕ್ತಿಯನ್ನು ಸಾಧನವಾಗಿ ಬಳಸಿ
ವಿಜಯಪುರ.ಜು.೨೧- ಕಾಲೇಜು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸುವ ವಯಸ್ಸಿನೊಂದಿಗಿದ್ದು ಈ ಸಂದರ್ಭವನ್ನು ವ್ಯರ್ಥ ಮಾಡಿಕೊಳ್ಳದೆ, ಮಾಡುವ ಕೆಲಸದಲ್ಲಿ ಶ್ರದ್ಧೆ, ಗುರು ಹಿರಿಯರಲ್ಲಿ ಭಕ್ತಿಯನ್ನು ಇಟ್ಟುಕೊಂಡು ಧೈರ್ಯ ವಾಗಿ ಮುನ್ನುಗ್ಗಿದಾಗ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದೆಂದು ಜಾನಪದ ಸಾಹಿತಿ ಅಪ್ಪಗೆರೆ ತಿಮ್ಮರಾಜುರವರು ತಿಳಿಸಿದರು.
ಅವರು ಇಲ್ಲಿನ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವತಿಯಿಂದ ಏರ್ಪಡಿಸಲಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮನೆ ಮನೆಗೆ ಪತ್ರಿಕೆ ಹಂಚುತ್ತಿದ್ದ ಹುಡುಗ ಖ್ಯಾತ ವಿಜ್ಞಾನಿಯಾಗುವುದರೊಂದಿಗೆ ಭಾರತದ ಪ್ರಥಮ ವ್ಯಕ್ತಿಯಾಗಿ ರಾಷ್ಟ್ರಪತಿಯಾಗಲು ಅವರಲ್ಲಿನ ಭಕ್ತಿ ಶ್ರದ್ಧೆ ಛಲವೇ ಕಾರಣವೆಂದು ತಿಳಿಸಿದರು.
ಪ್ರಗತಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೃಪಾ ಶಂಕರ್ ರವರು ಮಾತನಾಡುತ್ತ ವಿದ್ಯಾರ್ಥಿಗಳು ಶಿಸ್ತಿಗೆ ಸಿಪಾಯಿಗಳಾಗಿ, ಶ್ರದ್ದೆಗೆ ದಾಸರಾಗಿ, ಗುರಿ ಮುಟ್ಟುವ ತನಕ ಇಟ್ಟ ಛಲವನ್ನು ಬಿಡದಿರಿ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಸುರೇಶ್ ರವರು ಮಾತನಾಡುತ್ತ ಇಂದಿನ ಯುಗ ಸ್ಪರ್ಧಾತ್ಮಕವಾಗಿದ್ದು ಸಿಕ್ಕ ಅವಕಾಶವನ್ನು ಬಳಸಿಕೊಂಡು ಕೌಶಲ್ಯಭರಿತರಾಗಿ ಉತ್ತಮಸ್ಥಾಯಿಗೆ ತಲುಪಲು ಮೊದಲ ದಿನದಿಂದಲೇ ಪ್ರಯತ್ನಿಸಿ ಎಂದು ತಿಳಿಸಿದರು.
ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಬಿಂದು, ವಿಆರ್ ವಂಶಿ, ಪ್ರಣವ್, ಆತ್ರೇಯ, ಕುಮಾರಿ ಅಮೃತರವರು ಕಾರ್ಯಕ್ರಮ ನಡೆಸಿಕೊಟ್ಟರು. ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.