ರೈತರಿಗೆ ಉತ್ತಮ ಬಿತ್ತನೆ ಬೀಜ ಪೂರೈಕೆ ಮಾಡಿ: ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.21: ರೈತರಿಗೆ ಉತ್ತಮ ಇಳುವರಿ ನೀಡುವ ಭಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳನ್ನು ಸಕಾಲದಲ್ಲಿ ಪೂರೈಕೆ ಮಾಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಪಟ್ಟಣದ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳ ಕಛೇರಿಯ ಆವರಣದಲ್ಲಿ ರೈತರಿಗೆ ಭತ್ತದ ಭಿತ್ತನೆ ಬೀಜದ ಚೀಲಗಳನ್ನು ವಿತರಿಸಿ ಮಾತನಾಡಿದರು.
ನೀರಾವರಿ ಸಲಹಾ ಸಮಿತಿಗೆ ಕಳೆದ ಒಂದು ತಿಂಗಳಲ್ಲಿಯೇ ಪತ್ರ ಬರೆದು ತಾಲ್ಲೂಕಿನ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಜಲಸಂಪನ್ಮೂಲ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಮಳೆ ಚೆನ್ನಾಗಿ ಆದರೆ ರೈತ ಉತ್ತಮವಾಗಿ ಬೆಳೆ ಬೆಳೆದು ನಾಡಿಗೆ ಅನ್ನ ನೀಡುತ್ತಾನೆ. ಆದ್ದರಿಂದ ಅವನಿಗೆ ಗುಣಮಟ್ಟದ ಭಿತ್ತನೆ ಬೀಜಗಳನ್ನು ಒದಗಿಸುವುದು ನಿಮ್ಮ ಕರ್ತವ್ಯ. ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಭಿತ್ತನೆ ಬೀಜ ರೈತರಿಗೆ ಸುಲಭವಾಗಿ ದೊರಕುವಂತೆ ನೋಡಿಕೊಳ್ಳಬೇಕು. ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ತಾಲ್ಲೂಕಿನ ರೈತರು ಪಶುಪಾಲನೆ ಜೊತೆಗೆ ಹೈನೋದ್ಯಮವನ್ನು ಅವಲಂಬಿಸಿದ್ದಾರೆ. ಭತ್ತಕ್ಕೆ ಎಷ್ಟು ಬೇಡಿಕೆ ಇದೆಯೋ ಹುಲ್ಲಿಗೂ ಅಷ್ಟೇ ಬೇಡಿಕೆ ಇದೆ. ಇವೆಲ್ಲವನ್ನೂ ಪರಿಗಣಿಸಿ ರೈತರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಬೇಕು ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್‍ಕುಮಾರ್ ಮಾತನಾಡಿ ಈ ಬಾರಿ ತಾಲ್ಲೂಕಿನಲ್ಲಿ 497 ಮಿಮೀ ಮಳೆಯಾಗಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು ರಾಗಿ, ಮುಸುಕಿನ ಜೋಳ ಮತ್ತು ಭತ್ತದ ಬೀಜಗಳಿಗೆ ಬೇಡಿಕೆ ಹೆಚ್ಚಾಗಿದೆ. ತಾಲ್ಲೂಕಿನ ಆರು ರೈತ ಸಂಪರ್ಕ ಕೇಂದ್ರಗಳಲ್ಲಿ ಈ ಭೀತ್ತನೆ ಬೀಜಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಭತ್ತದಲ್ಲಿ ತನು, ಜ್ಯೋತಿ ಮತ್ತು ಆರ್.ಎನ್.ಆರ್.15048 ಅನ್ನು ಸಾಮಾನ್ಯ ವರ್ಗದ ರೈತರಿಗೆ ಶೇ50% ಹಾಗೂ ಎಸ್.ಸಿ.ಪಿ/ ಟಿ.ಎಸ್.ಪಿ ರೈತರಿಗೆ 75% ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. ರೈತಭಾಂಧವರು ಸಾರಜನಕಯುಕ್ತ ಗೊಬ್ಬರಗಳಾದ ಯೂರಿಯ, ಅಮೋನಿಯಂ ಸಲ್ಪೇಟ್ ಗೊಬ್ಬರವನ್ನು ಹೆಚ್ಚು ಬಳಸಿದರೆ ಇಳುವರಿ ಕಡಿಮೆಯಾಗುತ್ತದೆ. ರೈತರು ಆದಷ್ಟು ಸಾರಜನಕ, ರಂಜಕ, ಮತ್ತು ಪೆÇಟ್ಯಾಷ್ ಗೊಬ್ಬರವನ್ನು ಬಳಸಬೇಕು. ರೈತರಿಗೆ ಹೆಚ್ಚು ದರ ವಿಧಿಸಿ ಗೊಬ್ಬರಗಳನ್ನು ಮಾರಾಟ ಮಾಡಿದರೆ ಅಂತಹ ಅಂಗಡಿ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಕೃಷಿ ಅಧಿಕಾರಿಗಳಾದ ಶ್ರೀಧರ್, ಸತೀಶ್‍ಚಂದ್ರ, ಅಭಿಷೇಕ್‍ಗೌಡ, ಸವಿತಾಪಾಟೀಲ್, ಆತ್ಮ ಸಿಬ್ಬಂದಿ ಮತ್ತು ಇತರೆ ಅಧಿಕಾರಿಗಳು ಮತ್ತು ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಹಾಜರಿದ್ದರು.