ವೈಭವದಿಂದ ಜರುಗಿದ ಪ್ರಸಿದ್ಧ ಚಾಮರಾಜೇಶ್ವರ ಸ್ವಾಮಿ ರಥೋತ್ಸವ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 21- ಚಾಮರಾಜನಗರ ಸುಪ್ರಸಿದ್ಧ ಶ್ರೀ ಚಾಮರಾಜೇಶ್ವರ ಸ್ವಾಮಿರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಇಡೀ ರಾಜ್ಯದಲ್ಲಿಯೇ ಆಷಾಢ ಮಾಸದಲ್ಲಿ ನಡೆಯುವ ಏಕೈಕ ರಥೋತ್ಸವವನ್ನು ಅಪರಾಹ್ನ 12.28 ರ ಶುಭಲಗ್ನದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ರಥವೇರಿ ನಾಡ ದೇವತೆ ಶ್ರೀ ಚಾಮರಾಜೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ನಂತರ ತಾವು ಸಹ ಸಾರ್ವಜನಿಕರೊಡನೆ ಸೇರಿ ರಥದ ಹಗ್ಗವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪನಾಗ್, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕವಿತಾ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಉದೇಶ್ ಪಾಲ್ಗೊಂಡಿದ್ದರು.
ನಂತರ ಚಾಮರಾಜೇಶ್ವರ ಸ್ವಾಮಿ ಮೂರ್ತಿಯನ್ನು ಒಳಗೊಂಡ ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕೃತಗೊಂಡ ರಥವನ್ನು ಮಕ್ಕಳು ಯುವಕರೆನ್ನದೆ ಎಲ್ಲಾ ವಯಸ್ಸಿನವರು ಜಾತಿ ಬೇಧವಿಲ್ಲದೆ ರಥಕ್ಕೆ ಕಟ್ಟಿದ್ದ ಹಗ್ಗವನ್ನು ಎಳೆಯುತ್ತಾ ಜೈಕಾರ ಹಾಕುತ್ತಾ ಪ್ರಮುಖ ಬೀದಿಗಳಲ್ಲಿ ರಥವನ್ನು ಸಾಗಿಸಿದರು.
ಕಳೆದ ಎರಡು ವರ್ಷಗಳಿಂದ ಹೊಸದಾಗಿ ನಿರ್ಮಾಣಗೊಂಡು ಪುನರಾರಂಭ ಗೊಂಡಿರುವ ಆಷಾಢ ಮಾಸದಲ್ಲಿ ನಡೆಯುವ ಈ ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಆಗಮಿಸುತ್ತಾರೆ.
ನವ ದಂಪತಿಗಳೇ ಆಕರ್ಷಣೆ: ಆಷಾಢ ಮಾಸದ ಕಾರಣಇತ್ತೀಚೆಗೆ ಮದುವೆಯಾಗಿ ತಮ್ಮ ತಮ್ಮ ತವರು ಮನೆಯಲ್ಲಿ ಪ್ರತ್ಯೇಕವಾಗಿರುವ ನವದಂಪತಿಗಳು ಪರಸ್ಪರ ದೂರ ಇದ್ದು, ಒಬ್ಬರ ಮುಖ ಮತ್ತೊಬ್ಬರು ಮುಖಾಮುಖಿ ನೋಡಲಾಗದೆ ಮೊಬೈಲ್ ಸಂಭಾಷಣೆಯಲ್ಲಿಯೇ ಸಂತೋಷ ಪಡುತ್ತಿರುತ್ತಾರೆ. ಆದರೆ ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯಲ್ಲಿ ನಡೆವ ಈ ರಥೋತ್ಸವದ ನೆಪದಲ್ಲಿ ಹೊಸದಾಗಿ ಮದುವೆಯಾದ ಪತಿಯು ತನ್ನ ಪತ್ನಿಯನ್ನು ತಾಲ್ಲೂಕಿನ ಸಂಬಂಧಿಕರ ಮನೆಯಲ್ಲಿ ಮುಖಾಮುಖಿ ಭೇಟಿ ಮಾಡಿ ರಥೋತ್ಸವದಲ್ಲಿ ಪಾಲ್ಗೊಳ್ಳುವಾಗಿನ ಸಂಭ್ರಮ ವರ್ಣಿಸಲಸದ್ಯ. ಈ ರಥೋತ್ಸವದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ನವದಂಪತಿಗಳÀು ಜೋಡಿಯಾಗಿ ಪಾಲ್ಗೊಂಡು ಚಾಮರಾಜೇಶ್ವರಸ್ವಾಮಿ ರಥಕ್ಕೆ ಹಣ್ಣು ಜವನ ಎಸೆದು ನಂತರ ಖುಷಿಯಿಂದ ಕೈ ಕೈ ಹಿಡಿದುಕೊಂಡು ಓಡಾಡುವ ದೃಶ್ಯವು ಈ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.
ಸಹಸ್ರಾರು ಜನರು ಭಾಗಿ : ಈ ರಥೋತ್ಸವದಲ್ಲಿ ಮಕ್ಕಳು, ವೃದ್ಧರಾದಿಯಾಗಿ ಸಹಸ್ರಾರು ಜನರು ಪಾಲ್ಗೊಂಡು ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಿದ್ದಾರೆ.
ಈ ರಥೋತ್ಸವದಲ್ಲಿ ಗಾಡಿಗೊಂಬೆ, ಕಂಸಾಳೆ, ಗೊರವರ ಕುಣಿತ, ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ಹಲವಾರು ಜಾನಪದ ತಂಡಗಳು ಭಾಗವಹಿಸಿದ್ದವು.
ದೇವಸ್ಥಾನದ ಮುಂಭಾಗದಿಂದ ಸಾಗಿದ ರಥವು ರಥದ ಬೀದಿಯ ಪ್ರಮುಖ ರಸ್ತೆಗಳಾದ ಹಳೇ ಸಬ್‍ಜೈಲ್, ಎಸ್‍ಬಿಐ ಹತ್ತಿರ ದೊಡ್ಡ ಅಂಗಡಿ ಬೀದಿಯ ಮಹಾವೀರ ವೃತ್ತದ ಮೂಲಕ ಸಾಗಿ ಹಳೇ ತರಕಾರಿ ಮಾರುಕಟ್ಟೆ ಹಾಗೂ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೊರಟು ಹಳೇ ಬಸ್‍ಸ್ಟ್ಯಾಂಡ್ ಹಾಗೂ ತರಕಾರಿ ಮಾರುಕಟ್ಟೆ ಹಾಗೂ ಚಿಕ್ಕಅಂಗಡಿ ಬೀದಿಯ ನೃಪತುಂಗದಿಂದ ಮುಂದಕ್ಕೆ ಸಾಗಿ ಪುನಃ ದೇವಸ್ಥಾನದ ಮುಂಭಾಗಕ್ಕೆ ತಲುಪಿತು.