ಶಿಷ್ಟಾಚಾರ ಮೊದಲು ಶಾಸಕರೇ ಪಾಲಿಸಲಿ : ಅಫ್ಸರಮಿಯ
ಹುಮನಾಬಾದ್ : ಸೆ.28:ಕಾಂಗ್ರೆಸ್ ನಾಯಕರು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿರುವ ಶಾಸಕ ಡಾ. ಸಿದ್ದು ಪಾಟೀಲ್ ಅವರೇ ಮೊದಲು ಶಿಷ್ಟಾಚಾರ ಪಾಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರಮಿಯ ಹೇಳಿದರು.
ಪಟ್ಟಣದ ಮಾಜಿ ಸಚಿವರ ಗೃಹ ಕಚೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಶೇಖರ ಪಾಟೀಲ್ ಅವರು ಒಟ್ಟು 4 ಬಾರಿ ಶಾಸಕರಾಗಿ, ಒಂದು ಸಚಿವರಾಗಿ ಅಧಿಕಾರ ನಿರ್ವಹಣೆ ಮಾಡಿದ ಅನುಭವವಿದೆ. ಹೀಗಾಗಿ ಶಾಸಕರಿಂದ ಶಿಷ್ಟಾಚಾರದ ಪಾಠ ಕಲಿಯುವ ಅವಶ್ಯಕತೆ ಅವರಿಗೆ ಇಲ್ಲ. ಮತ್ತೊಬ್ಬರಿಗೆ ಶಿಷ್ಟಾಚಾರದ ಪಾಠ ಹೇಳುವ ಶಾಸಕರೇ ಮೊದಲು ಶಿಷ್ಟಾಚಾರದ ಕುರಿತು ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು.
ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಓಂಕಾರ ತುಂಬಾ ಮಾತನಾಡಿ, ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರು ತಪ್ಪು ನಿರ್ಧಾರಗಳನ್ನು ಕೈಗೊಂಡ ಸಂದರ್ಭಗಳಲ್ಲಿ ಅವರಿಗೆ ಪ್ರಶ್ನೆ ಮಾಡುವ ಅಧಿಕಾರ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರಿಗೆ ಅಧಿಕಾರವಿದೆ. ಹೀಗಾಗಿ ನೀತಿ ನಿಯಮಗಳನ್ನು ಹೇಳುವ ಶಾಸಕ ಡಾ. ಸಿದ್ದು ಪಾಟೀಲ್ ಅವರು ಜನರ ನಿರೀಕ್ಷೆಗೆ ಅನುಗುಣವಾಗಿ ಉತ್ತಮ ಸೇವೆ ನೀಡುವ ಪ್ರಯತ್ನ ಮಾಡಲಿ ಎಂದು ಸಲಹೆ ನೀಡಿದರು.
ಶಿಷ್ಟಚಾರವನ್ನೂ ಪಾಲಿಸದೇ 5 ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಕ್ಷೇತ್ರದ ಇನ್ನೊಂದು ಕಡೆ ಕೈಗೊಳ್ಳುತ್ತಿರುವ ಕಾಮಗಾರಿಯಲ್ಲಿ ಹಳೆ ಕಲ್ಲನ್ನೇ ಬಳಸಲಾಗುತ್ತಿದೆ.
ಅಷ್ಟೇ ಏಕೇ ಈಚೆಗಷ್ಟೇ ಮಾಡಗುಳ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಸ್ವತಃ ತಾವೇ ಹೋಗಿ ಭೂಮಿಪೂಜೆ ನೆರವೇರಿಸಿದ್ದಾರೆ. ಇದೆಲ್ಲ ನೋಡಿದರೆ ತಾನಾಶಾಹಿ ನಡೆಸುತ್ತಿರುವವರು ನಾವೋ ಅವರೋ ನೀವೇ ಹೇಳಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ ,ಮಲ್ಲಿಕಶಾರ್ಜುನ ಮಾಶೆಟ್ಟಿ, ಕಂಟೆಪ್ಪ ದಾನಾ, ಮಲ್ಲಿಕಾರ್ಜುನ ಮಹೀಂದ್ರಕರ್, ಸೈಯದ್ ಯಾಸೀನಲಿ, ಸೇರಿದಂತೆ ಉಪಸ್ಥಿತರಿದ್ದರು.