ಸುಂದರ ನಗರಕ್ಕೆ ಹಲವು ಕಠಿಣ ಕ್ರಮ
ಮಾಲೂರು, ಆ.೬- ಪಟ್ಟಣದ ಸ್ವಚ್ಛತೆ ಕಾಪಾಡಿಕೊಂಡು ಸುಂದರ ನಗರ ಮಾಡುವ ಉದ್ದೇಶದಿಂದ ಹಲವು ಕಠಿಣ ಕ್ರಮ ಕೈಗೊಳ್ಳವ ನಿರ್ಧಾರ ಮಾಡಿದ್ದು,ಎಲ್ಲ ಸದಸ್ಯರು ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ನೀಡಬೇಕೆಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ಹೇಳಿದರು.
ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾದ ಮೇಲೆ ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಪ್ರಥಮ ಸಭೆಯನ್ನು ನಡೆಸಿದ ಅಧ್ಯಕ್ಷ ಎ.ರಾಜಪ್ಪ ಮಾತನಾಡಿ, ಹಾಲಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬೀಳುತ್ತಿರುವ ಕಸದ ಬಗ್ಗೆ,ಮನೆ ಬಾಗಿಲಿಗೆ ನಿತ್ಯ ಹೋಗಬೇಕಾದ ಕಸ ವಿಲೇವಾರಿ ವಾಹನ ವಾರಕ್ಕೂಮ್ಮೆ ಹೋಗುತ್ತಿರುವ ಅವ್ಯವಸ್ಥೆ ಬಗೆ ಸೇರಿದಂತೆ ರಸ್ತೆ ಅಕ್ರಮಿಸುತ್ತಿರುವ ಪುಟ್‌ಪಾತ್ ಅಂಗಡಿ,ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದು ಬಗ್ಗೆ ಕೆಲವು ಕಠಿಣ ಕ್ರಮ ಕೈಗೊಳ್ಳಬೇಕಾಗಿದ್ದು,ಯಾರು ಒತ್ತಡ ಹೇರದೆ ನಮ್ಮ ಕಾರ್ಯಾಚರಣೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪಟ್ಟಣದ ಹೂಟೇಲ್ ಬೇಕರಿ,ತರಕಾರಿ ಹಾಗೂ ಮಾಂಸ ಮಾರಾಟ ಮಳಿಗೆಗಳಲ್ಲಿ ಯಥೇಚ್ಚವಾಗಿ ಪ್ಲಾಸ್ಟಿಕ್ ಬಳಸುತ್ತಿರುವುದನ್ನು ಸಂಪೂರ್ಣ ನಿಯಂತ್ರಿಸಲು ಪರಿಣಾಮಕಾರಿ ಕಾರ್ಯಚರಣೆ ಅವಶ್ಯವಾಗಿದ್ದು,ಇದಕ್ಕಾಗಿ ಪ್ಲಾನ್ ಸಹ ಮಾಡಲಾಗಿದೆ ಎಂದರು. ಪಟ್ಟಣದಲ್ಲಿ ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳು,ಮಾಲ್ ಗಳು ಪುರಸಭೆ ಸಲ್ಲಿಸಬೇಕಾದ ತೆರಿಗೆಯನ್ನು ವಂಚಿಸುತ್ತಿರುವುದು ಕಂಡು ಬಂದಿದ್ದು,ಶೀಘ್ರವಾಗಿ ಈ ಸಂಬಂಧ ಕಾರ್ಯಚರಣೆ ನಡೆಸಲಾಗುವುದು ಎಂದರು.
ರಸ್ತೆಯನ್ನು ಅಕ್ರಮಿಸಿ ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಗಳ ಒತ್ತುವರಿ ತೆರವುಗೊಳಿಸುವ ಜತೆಯಲ್ಲಿ ನಿಗದಿತ ಜಾಗದಲ್ಲಿ ಮಾತ್ರ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದ ರಾಜಪ್ಪ ಪ್ರತಿ ಬೀದಿ ವ್ಯಾಪಾರಸ್ಥರು ತಮ್ಮ ಅಂಗಡಿಗಳ ಮುಂದೆ ಹಸಿ ಕಸ ಒಣ ಕಸಕ್ಕೆ ಡಬ್ಬಿ ಇಡುವುದನ್ನು ಕಡ್ಡಾಯ ಮಾಡಲಾಗುವುದು ಎಂದರು.ಪ್ರತಿ ಸಂಜೆ ೫ ರ ವೇಳೆಗೆ ಸ್ಥಳಕ್ಕೆ ಬರುವ ಪುರಸಭೆಯ ಕಸ ವಿಲೇವಾರಿ ವಾಹನಗಳಿಗೆ ಕಸ ಹಾಕಬೇಕೆಂದರು. ಪಟ್ಟಣದಲ್ಲಿ ಹಾಳಾಗಿರುವ ರಸ್ತೆಗಳ ಕಾಮಗಾರಿಗೆ ಕ್ರೀಯಾಯೋಜನೆ ತಯಾರಾಗುತ್ತಿದ್ದು,ಶೀಘ್ರದಲ್ಲೇ ರಸ್ತೆ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದರು.ಹಿರಿಯ ಆರೋಗ್ಯ ಅಧಿಕಾರಿ ಶ್ರೀನಿವಾಸ್, ಪುರಸಭೆ ಸದಸ್ಯರಾದ ವೇಮನ, ಮುನಿರಾಜು, ಚೈತ್ರ ರವಿ ಹೇಮಾ, ಭಾರತಮ್ಮ, ಮಂಜುಳ ಇದ್ದರು.