ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿ: ಎಐಡಿಎಸ್‍ಓ ಅಸಮಾಧಾನ
ಕಲಬುರಗಿ:ಅ.05:ಸತತವಾಗಿ ಶೈಕ್ಷಣಿಕವಾಗಿ ಹಿಂದುಳಿಯುತ್ತಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಆರು ಜನ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿರುವ ಕುರಿತು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಕಾರ್ಯದರ್ಶಿ ತುಳಜರಾಮ್ ಎನ್.ಕೆ., ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶೈಕ್ಷಣಿಕ ಗುಣಮಟ್ಟವನ್ನು ಸುಧಾರಣೆ ಮಾಡಬೇಕೆಂದರೆ ಆ ಭಾಗದ ಶಿಕ್ಷಣ ತಜ್ಞರ ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಆದರೆ ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಸರ್ಕಾರ ರಚಿಸಿರುವ ಸಮಿತಿಯಲ್ಲಿ ಈ ಭಾಗದ ಶಿಕ್ಷಣ ತಜ್ಞರು, ಶಿಕ್ಷಕರಿಲ್ಲ ಬದಲಾಗಿ ದೊಡ್ಡ ದೊಡ್ಡ ಖಾಸಗಿ ಸಂಸ್ಥೆಗಳ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳನ್ನು ಸಮಿತಿಯಲ್ಲಿರಿಸಲಾಗಿದೆ. ಇದು ಅತ್ಯಂತ ಅವೈಜ್ಞಾನಿಕ ಮತ್ತು ಪ್ರಶ್ನೆ ಹುಟ್ಟಿಸುವ ನಡೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಶಿಕ್ಷಣ ತಜ್ಞರು, ಶಿಕ್ಷಕರಿಲ್ಲದೆ ಈ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಲು ಸಾಧ್ಯವಿಲ್ಲ. ಇದನ್ನು ವಿದ್ಯಾರ್ಥಿಗಳು ಶಿಕ್ಷಣ ಪ್ರೇಮಿಗಳು ಪೆÇೀಷಕರು ಒಪ್ಪುವುದಿಲ್ಲ. ಆದ್ದರಿಂದ ಈ ಭಾಗದ ಶೈಕ್ಷಣಿಕ ಗುಣಮಟ್ಟದ ಹಿತದೃಷ್ಟಿಯಿಂದ ಕೂಡಲೇ ಈ ಸಮಿತಿಯನ್ನು ಪ್ರಜಾತಾಂತ್ರಿಕವಾಗಿ, ವೈಜ್ಞಾನಿಕ ದೃಷ್ಟಿಕೋನದಿಂದ ಈ ಭಾಗದ ಶಿಕ್ಷಣ ತಜ್ಞರು ಶಿಕ್ಷಕರು ನಿವೃತ್ತ ಪ್ರಾಧ್ಯಾಪಕರನ್ನು ಒಳಗೊಂಡ ಸಮಿತಿಯನ್ನು ಪುನರಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.