ಕ್ರೀಡಾಕ್ಷೇತ್ರದಲ್ಲಿ ಜಿಲ್ಲೆಯ ಕೀರ್ತಿ ಹೆಚ್ಚಿಸಿ-ಮಲ್ಲೇಶಬಾಬು
ಕೋಲಾರ,ಜು,೨೧- ಶ್ರದ್ಧೆ,ಆಸಕ್ತಿಯಿಂದ ನಿಮ್ಮ ಕಲಿಕೆ ಮುಂದುವರೆಸುವುದರ ಜತೆಗೆ ಕೋಲಾರ ಜಿಲ್ಲೆಯನ್ನು ಕ್ರೀಡಾಕ್ಷೇತ್ರದಲ್ಲೂ ಮುಂಚೂಣಿಗೆ ತರಲು ಸಮಗ್ರ ಶಿಕ್ಷಣದ ಭಾಗವಾದ ಆಟೋಟಗಳಿಗೂ ಒತ್ತು ನೀಡಿ, ನಿರಂತರ ಅಭ್ಯಾಸದಿಂದ ಜಿಲ್ಲೆಯ ಕೀರ್ತಿ ಹೆಚ್ಚಿಸಿ ಎಂದು ಸಂಸದ ಎಂ.ಮಲ್ಲೇಶಬಾಬು ಕರೆ ನೀಡಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ನಗರದ ರವಿ ಪಿಯು ಹಾಗೂ ಪದವಿಕಾಲೇಜು ಆಶ್ರಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರಿಕೆಟ್ ಮತ್ತಿತರ ಕ್ರೀಡೆಗಳನ್ನು ಟಿವಿಯಲ್ಲಿ ನೋಡಿ ಖುಷಿಪಡುವುದು ಮಾತ್ರವಲ್ಲ ನೀವು ಅವರಂತೆ ಸಾಧನೆ ಮಾಡುವ ಆತ್ಮವಿಶ್ವಾಸದೊಂದಿಗೆ ಕ್ರೀಡಾಭ್ಯಾಸ ಮಾಡಿ, ಕೋಲಾರ ಜಿಲ್ಲೆಯನ್ನು ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಿ ಎಂದು ಕಿವಿಮಾತು ಹೇಳಿದರು.
ತಮ್ಮ ಬದುಕು ಸಾಗಿಬಂದ ಕಥೆಯನ್ನು ಹೇಳಿದ ಸಂಸದರು ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ನೆರಳಲ್ಲೇ ತಾನು ಸಾಧಕನಾಗಿ ಬೆಳೆದೆ ಎಂದು ತಿಳಿಸಿ, ಬಂಗಾರಪೇಟೆಯಲ್ಲಿ ಎರಡು ಬಾರಿ ನಿಂತು ಸೋತೆ ಆದರೆ ಇದೀಗ ಜಿಲ್ಲೆಯ ಜನತೆ ನನ್ನನ್ನು ಸಂಸದನನ್ನಾಗಿ ಆಯ್ಕೆ ಮಾಡಿದ್ದು, ಜನರ ಋಣ ನನ್ನ ಮೇಲಿದೆ ಎಂದರು.
ಜಿಲ್ಲೆಯ ಜನರ ಋಣ ತೀರಿಸಲು ಉದ್ಯೋಗ ಸೃಷ್ಟಿಯ ಜತೆಗೆ ಅದಕ್ಕೂ ಮೊದಲು ಕೌಶಲ್ಯಾಧಾರಿತ ತರಬೇತಿ ಕೇಂದ್ರ ಸ್ಥಾಪಿಸಿ, ಜಿಲ್ಲೆಯ ಯುವಕರಿಗೆ ಕೌಶಲ್ಯ ಕಲಿಸಿಕೊಟ್ಟರೆ ಯಾವುದೇ ಕೈಗಾರಿಕೆ ಉದ್ಯೋಗ ನೀಡಲು ಅವರನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಅತಿಶೀಘ್ರ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರದೊಂದಿಗೆ ಕೇಂದ್ರ ಸಚಿವರಾದ ಕುಮಾರಣ್ಣನವರ ಸಹಕಾರ ಪಡೆದು ಪ್ರಯತ್ನಿಸುವುದಾಗಿ ಭರವಸೆ ನೀಡಿ, ವಿದ್ಯಾರ್ಥಿಗಳು ಹಿರಿಯರ ಆಶಯಗಳಿಗೆ ವಿರುದ್ದವಾಗಿ ನಡೆಯದಿರಿ, ಅವರು ನಿಮ್ಮ ಮೇಲಿಟ್ಟಿರುವ ಗೌರವ ಉಳಿಸಿ ಎಂದು ಕೋರಿದರು.
ರವಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮೂರಾಂಡಹಳ್ಳಿ ಡಾ.ಇ.ಗೋಪಾಲಪ್ಪ ಮಾತನಾಡಿ, ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಿಂದ ಪಿಯುಸಿ ಹಂತಕ್ಕೆ ಬಂದಿದ್ದೀರಿ, ಪಿಯುಸಿ ನಿಮ್ಮ ಜೀವನದ ಹಾದಿ ಗುರುತಿಸುವ ಅತಿ ಮುಖ್ಯ ಘಟ್ಟವಾಗಿದೆ, ಇಲ್ಲೇ ನೀವು ಮುಂದೆ ವೈದ್ಯರೋ,ಇಂಜಿನಿಯರೋ, ಶಿಕ್ಷಕರೋ ಎಂಬುದನ್ನು ನಿರ್ಧರಿಸುವ ದಾರಿ ಗೋಚರವಾಗುತ್ತದೆ ಎಂದರು.
ನೀವು ತಂದೆ,ತಾಯಿ ಪಾಠ ಹೇಳಿಕೊಟ್ಟ ಗುರು, ನಿಮ್ಮ ಸ್ವಂತ ಊರು, ಓದಿದ ಶಾಲೆ ಮರೆಯದಿರಿ, ನೀವು ಎಷ್ಟೇ ಸಾಧಕರಾದರೂ ಹಿರಿಯರ ಆಶೀರ್ವಾದ ಅಗತ್ಯವಿದೆ ಎಂಬುದನ್ನು ಅರಿತು ಹೆತ್ತವರನ್ನು ಜತೆಯಲ್ಲೇ ಇಟ್ಟುಕೊಂಡು ಸಾಕುವ ಮನಸ್ಥಿತಿ ಬೆಳೆಸಿಕೊಳ್ಳಿ ಎಂದರು.
ರವಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಜಿ.ನರೇಶಬಾಬು ಮಾತನಾಡಿ, ಕಲ್ಲನ್ನು ಉದಾಹರಣೆ ನೀಡಿ ಏಟು ತಿನ್ನದ ಕಲ್ಲು ಮೆಟ್ಟಿಲಾಗುತ್ತದೆ, ಅತಿ ಹೆಚ್ಚು ಏಟು ತಿಂದು ವಿಗ್ರಹದ ರೂಪ ಪಡೆದ ಕಲ್ಲು ಸಾವಿರಾರು ಮಂದಿಯಿಂದ ಪೂಜೆಗೆ ಒಳಗಾಗುತ್ತದೆ ಎಂಬ ಸತ್ಯ ಅರಿತು ನೀವು ಈಗ ಕೇವಲ ಐದಾರು ವರ್ಷ ಕಷ್ಟಪಟ್ಟರೆ ನಿಮ್ಮ ಮುಂದಿನ ೫೦ ವರ್ಷ ಉತ್ತಮ ಜೀವನ ಸಿಗುತ್ತದೆ ಎಂದು ಅರಿತು ಶ್ರದ್ದೆಯಿಂದ ಓದಿ ಎಂದರು.
ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು ವಾಣಿಜ್ಯವಿಭಾಗದ ಮುಖ್ಯಸ್ಥ ಮುರಳೀಧರ್ ಮಕ್ಕಳಿಗೆ ಹಿತವಚನ ನೀಡಿದರು.
ಈ ಸಂದರ್ಭದಲ್ಲಿ ರವಿ ಶಿಕ್ಷಣ ಸಂಸ್ಥೆ ನಿರ್ದೇಶಕಿ ಎ.ಸುಷ್ಮಾ, ರವಿ ಬಿಎಡ್ ಕಾಲೇಜು ಪ್ರಾಂಶುಪಾಲ ಮಂಜುನಾಥರೆಡ್ಡಿ, ಪದವಿ ಕಾಲೇಜು ಪ್ರಾಂಶುಪಾಲ ಸಲೀಂಪಾಷಾ, ಸಂಸ್ಥೆಯ ಲಿಯಾಖತ್ ಆಲಿಖಾನ್, ಸೈಯದ್ ಹೈದರ್,ಮಹಮದ್ ಝಹೀರ್, ಬಾಬಾಜಾನ್, ಸೈಯದ್ ಅಜ್ಮಲ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.