ಸಮುದಾಯದ ಅಭಿವೃದ್ಧಿಗೆ ಶಕ್ತಿ ಮೀರಿ ಸಹಕಾರ: ಸುಧಾಕರ್
ಚಿಕ್ಕಬಳ್ಳಾಪುರ.ಜು.೨೧- ಬೆಂಗಳೂರು ಗ್ರಾಮಾಂತರ ಜಿಲ್ಲೆ: ವಹ್ನಿಕುಲ ಕ್ಷತ್ರಿಯ (ತಿಗಳ) ಸಮುದಾಯದ ಅಭಿವೃದ್ಧಿಗೆ ನನ್ನ ಶಕ್ತಿ ಮೀರಿ ಸದಾ ಸಹಕಾರ ನೀಡಲಾಗುವುದು ಎಂದು ಡಾ.ಕೆ.ಸುಧಾಕರ್ ಅವರು ಸಮುದಾಯದವರಿಗೆ ಭರವಸೆ ನೀಡಿದರು.
ದೇವನಹಳ್ಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ವಹ್ನಿಕುಲ ಕ್ಷತ್ರಿಯ (ತಿಗಳ) ಸಮುದಾಯದಿಂದ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾಗಿರುವ ಡಾ.ಕೆ.ಸುಧಾಕರ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಭಕ್ತಿಗೆ, ಧೈರ್ಯಕ್ಕೆ ಮತ್ತು ನಂಬಿಕೆಗೆ ವಹ್ನಿಕುಲ ಕ್ಷತ್ರಿಯ (ತಿಗಳ) ಸಮುದಾಯ ಹೆಸರುವಾಸಿಯಾಗಿದೆ. ಇವತ್ತು ದ್ರೌಪತಿ ತಾಯಿಯನ್ನು ಆರಾಧಿಸುವಂತಹ, ಭಕ್ತಿಭಾವದಿಂದ ಪೂಜೆ ಮಾಡುವಂತಹ ಸಮುದಾಯವಾಗಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ ಎಂದು ನುಡಿದರು.
ಇವತ್ತು ಕರಗವನ್ನು ಹೊರುವ ಸಮುದಾಯ, ಯಾವುದೇ ಧಾರ್ಮಿಕ ಪರಂಪರೆಯನ್ನು ಎಲ್ಲಿ ಕೂಡ ಮೊಟಕಾದಂತೆ ಸಂಪ್ರದಾಯವನ್ನು ಮುಂದುವರೆಸಿಕೊಂಡು ಮುನ್ನಡೆಯುತ್ತಿದೆ. ರೈತರು ಸುಭಿಕ್ಷೆಯಿಂದ ಇರಬೇಕು, ಸರಿಯಾದ ಸಮಯಕ್ಕೆ ಮಳೆ ಬೆಳೆಯಾಗಬೇಕೆಂದು ಕರಗದ ಸಂಪ್ರದಾಯ ಪಾಲಿಸುತ್ತಿದೆ. ಇದೇ ಈ ಬಾರಿ ಎಲ್ಲ ಕಡೆ ಉತ್ತಮ ಮಳೆಯಾಗಿ ಕೆರೆಗಳು ತುಂಬಿ, ನದಿಗಳು ಹರಿಯುತ್ತಿದೆ ಎಂದರು.
ಸಮುದಾಯಕ್ಕೆ ನಾವು: ನಮ್ಮಿಂದ ಸಮುದಾಯವಲ್ಲ, ಸಮುದಾಯಕ್ಕೆ ನಾವು ಎಂದಾಗಬೇಕು, ನಾವು ಸಮುದಾಯಕ್ಕೆ ಏನೂ ಮಾಡುತ್ತೇವೆ, ಯಾವ ರೀತಿ ನಾವು ಕೆಲಸ ಮಾಡುತ್ತೇವೆ ಎಂಬುದು ಮುಖ್ಯವಾಗಿದೆ. ಸ್ಪಾರ್ಥ ಮನೋಭಾವನೆಯನ್ನು ಬಿಡಬೇಕು ಆಗ ಮಾತ್ರ ಸಮುದಾಯ ಅಭಿವೃದ್ಧಿಯತ್ತ ಸಾಗಲಿದೆ ಎಂದರು.
ಸಮುದಾಯಕ್ಕೆ ಭರವಸೆ: ಸಮುದಾಯದಿಂದ ನೀಡಿರುವ ಬೇಡಿಕೆಯ ಮನವಿ ಪತ್ರದಲ್ಲಿ ಸಾಧಕ ಬಾಧಕಗಳನ್ನು ಚರ್ಚಿಸಿ ಶೀಘ್ರವಾಗಿ ಆಗಬೇಕಾಗಿರುವಂತಹ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡಲಾಗುವುದು, ಸಂಸದರಿಂದ ಆಗಬೇಕಾದ ಕೆಲಸವನ್ನು ಯಾವುದೇ ಸಂದರ್ಭದಲ್ಲಿ ಭೇಟಿಯಾಗಲು ನಮ್ಮ ಮನೆ ಮತ್ತು ಮನಸ್ಸು ಸದಾ ತೆರೆದಿರುತ್ತದೆ ಎಂದು ಸಮುದಾಯಕ್ಕೆ ಭರವಸೆ ನೀಡಿದರು.
ಕಾರ್ಯಕ್ರಮದ ನೇತೃತ್ವದ ವಹಿಸಿದ್ದ ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾದ ರಾಜ್ಯಾಧ್ಯಕ್ಷ ಎಸ್.ಆರ್.ಎಸ್ ಡಾ.ವಿ.ದೇವರಾಜ್ ಮಾತನಾಡಿ, ಸಮುದಾಯದ ಪರವಾಗಿ ಇಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿರುವ ಡಾ.ಕೆ.ಸುಧಾಕರ್ ಅವರನ್ನು ಸನ್ಮಾನಿಸಲಾಗುತ್ತಿದೆ. ಜನರ ಸೇವೆ ಮಾಡಲು ಎಲ್ಲರೂ ಅವರಿಗೆ ಮತ್ತಷ್ಟು ಶಕ್ತಿ ತುಂಬಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಬುಳ್ಳಹಳ್ಳಿ ಆದಿಪರಾಶಕ್ತಿ ಮಹಾ ಆಶ್ರಮದ ಶ್ರೀ ಬಾಲಯೋಗಿ ಸಾಯಿ ಮಂಜುನಾಥ್ ಮಹಾರಾಜ್ ಶ್ರೀಗಳು ಆಶೀವರ್ಚನ ನೀಡಿದರು. ವೇದಿಕೆಯಲ್ಲಿ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು.
ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್, ಮಾಜಿ ಶಾಸಕ ಜಿ.ಚಂದ್ರಣ್ಣ, ವಹ್ನಿಕುಲ ಕ್ಷತ್ರಿಯ (ತಿಗಳ) ಸಂಘದ ರಾಜ್ಯಾಧ್ಯಕ್ಷ ಡಾ.ಮು.ಕೃಷ್ಣಮೂರ್ತಿ, ಉಪಾಧ್ಯಕ್ಷ ವೈ,ಎನ್.ಶಾಮಣ್ಣ, ವೈಎನ್ ಮುನಿರಾಜು, ನಿರ್ದೇಶಕರಾದ ಕನಕರಾಜು, ಸಂಘಟನಾ ಕಾರ್ಯದರ್ಶಿ ಮುನಿವೀರಣ್ಣ, ಕೆಎಂ.ಮಂಜುನಾಥ್, ದೊಡ್ಡಬಳ್ಳಾಪುರ ರಾಮಣ್ಣ, ಹೊಸಕೋಟೆ ಪ್ರಕಾಶ್, ವಿಜಪುರ ಸುರೇಶ್, ಬೈಚಾಪುರ ನಟರಾಜ್, ಯಲಿಯೂರು ನಾರಾಯಣಸ್ವಾಮಿ, ವಿಜಯ್‌ಕುಮಾರ್, ಮುನಿರಾಜು, ರಾಮಚಂದ್ರಪ್ಪ, ಬೂದಿಗೆರೆ ನಾರಾಯಣಸ್ವಾಮಿ, ಕುಂದಾಣ ಲಕ್ಷ್ಮಣ್, ವಿಜಯಪುರ ಚಿನ್ನಪ್ಪ ಹಾಗೂ ಸಮುದಾಯದ ಕುಲಬಾಂಧವರು ಉಪಸ್ಥಿತರಿದ್ದರು.