ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ: ಅರುಣ್‌ಕುಮಾರ್
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೦: ದೇಶದ ದೊಡ್ಡ ದೊಡ್ಡ ಮಹಾತ್ಮರು, ಮಹನೀಯರು, ಸಾಧಕರೆಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿದವರಾಗಿದ್ದು, ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣಕುಮಾರ ಕಿವಿಮಾತು ಹೇಳಿದರು. ಇಲ್ಲಿನ ಗಾಂಧಿ ನಗರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ  ಬ್ರೆಡ್ಸ್ ಸಂಸ್ಥೆ ಬೆಂಗಳೂರು, ಡಾನ್ ಬಾಸ್ಕೋ ದಾವಣಗೆರೆಯಿಂದ ಹಮ್ಮಿಕೊಂಡಿದ್ದ ಮಕ್ಕಳ ಸುರಕ್ಷತಾ ಜಾಲಬಂಧ ಯೋಜನೆ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸುರಕ್ಷತೆ, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ಒಗ್ಗೂಡಬೇಕಿದೆ ಎಂದರು. ಬಡವರು, ಸಮಾಜದ ಉನ್ನತಿಗಾಗಿ ಸೇವೆ ಮಾಡುವವರೇ ವಿಶ್ವದಲ್ಲಿ ಮಹಾತ್ಮರು, ಮಹನೀಯರು, ಸಾಧಕರಾಗಿ ಹೊರ ಹೊಮ್ಮಿದ ಸಾಲು ಸಾಲು ನಿದರ್ಶನಗಳಿವೆ. ಮಕ್ಕಳು, ತುಳಿತಕ್ಕೆ ಒಳಗಾದವರು, ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಅಭಿವೃದ್ಧಿಯನ್ನು ಮಾಡುವವರ ಪಾತ್ರವು ಅಜರಾಮರವಾಗಿ ಉಳಿಯಲಿದೆ. ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮ ಗಾಂಧಿ, ಮದರ್ ತೆರೇಸಾರಂತಹ ಸಾಧಕರು ಇದಕ್ಕೆ ನಿದರ್ಶನ ಎಂದು ತಿಳಿಸಿದರು. ಶಿಕ್ಷಣ ಮತ್ತು ಆರೋಗ್ಯಗಳ ಒಳಿತಿಗಾಗಿ, ಮಕ್ಕಳ ಸುರಕ್ಷತೆಗಾಗಿ ಎಲ್ಲರೂ ಒಂದಾಗಿ ಕಾರ್ಯ ಪ್ರವೃತ್ತರಾಗಿರಬೇಕಾಗಿದೆ. ಇದು ಇಂದಿನ ಅನಿವಾರ್ಯತೆಯೂ ಆಗಿದೆ. ಡಾನ್ ಬಾಸ್ಕೋ ಸಂಸ್ಥೆಯು ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ, ದಾವಣಗೆರೆಯನ್ನು ಮಕ್ಕಳ ಸ್ನೇಹಿ ಮಹಾ ನಗರವಾಗಿಸಲು ಮಕ್ಕಳ ಸುರಕ್ಷತಾ ಜಾಲಬಂಧ ಯೋಜನೆ ರೂಪಿಸಿ, ಅನುಷ್ಟಾನಗೊಳಿಸುತ್ತಿರುವ ಸಮಂಜಸ ಕಾರ್ಯವಾಗಿದೆ ಎಂದು ಶ್ಲಾಘಿಸಿದರು. ಸಂಸ್ಥೆಯ ಫಾದರ್ ರೆಜಿ ಜೇಕಬ್ ಮಾತನಾಡಿ, ಮಕ್ಕಳ ರಕ್ಷಣೆ ಮತ್ತು ಸುರಕ್ಷೆಗಾಗಿ ಜಿಲ್ಲಾದ್ಯಂತ ಎಲ್ಲರನ್ನೂ ಒಳಗೊಂಡ ಸುರಕ್ಷತಾ ಪರದೆಯನ್ನು ಬಿಗಿಗೊಳಿಸಬೇಕಾಗಿದೆ. ಡೆಂಘೀಯಿಂದ ರಕ್ಷಣೆ ಪಡೆಯಲು ಹೇಗೆ ಎಲ್ಲರೂ ಸೊಳ್ಳೆ ಪರದೆ ಬಳಸುತ್ತೇವೆಯೋ ಅದೇ ರೀತಿ ಮಕ್ಕಳ ಸುರಕ್ಷತೆಗೂ ಒಂದು ಸುರಕ್ಷತಾ ಪರದೆಯನ್ನು ಗಟ್ಟಿಗೊಳಿಸೋಣ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಡುವ ಕೆಲಸ ಆಗಬೇಕಿದೆ ಎಂದರು. ಈ ವೇಳೆ ಬಾಷಾ ನಗರ ಆಸ್ಪತ್ರೆಯ ಡಾ.ರೇಖಾ, ಸುಧಾ, ಜಯಮ್ಮ, ಏಡ್ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್.ಬಾಬಣ್ಣ, ಮುಖ್ಯ ಶಿಕ್ಷಕರಾದ ಆರ್.ಯು.ಸೋಮಶೇಖರ, ಪಾರ್ವತಮ್ಮ, ಸಿಎಸ್‌ಎನ್ ಯೋಜನೆಯ ಸಂಯೋಜಕ ಬಿ.ಮಂಜಪ್ಪ, ಎಂ.ಹೊನ್ನಪ್ಪ, ಎಚ್.ನಾಗರಾಜ ಇತರರು ಇದ್ದರು.
—————————–