ಬಾರ್ ಸ್ಥಳಾಂತರಕ್ಕೆ ಆಗ್ರಹ, ಡಿಸಿ, ಎಸ್ಪಿಗೆ ಮನವಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೦: ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ವಿನೋಬ ನಗರದ ೪ನೇ ಮುಖ್ಯ ರಸ್ತೆಯಲ್ಲಿರುವ ಕೆ.ಎಸ್.ವೈನ್ ಲ್ಯಾಂಡನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ವಿನೋಬಾ ನಗರ, ಯಲ್ಲಮ್ಮ ನಗರದ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಡಿಸಿ, ಎಸ್ಪಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಅನುಪಮಾ ರವಿಕುಮಾರ್, ಬಾರ್ ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಹಲವಾರು ಬಾರಿ ಅಬಕಾರಿ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮಧ್ಯದ ಅಂಗಡಿಯು ಇರುವ ಕಾರಣ ವಿನೋಬ ನಗರ, ಯಲ್ಲಮ್ಮ ನಗರ, ಶಾಂತಿ ನಗರಕ್ಕೆ ಹೋಗುವ ನಿವಾಸಿಗಳಿಗೆ ಬಹಳಷ್ಟು ತೊಂದರೆಗಳಾಗುತ್ತಿವೆ. ಇಲ್ಲಿ ಮದ್ಯಪಾನ ಮಾಡಿದವರು ರಸ್ತೆಯ ಮೇಲೆ, ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದರು.ಇದಲ್ಲದೇ ಕುಡಿತದ ನಶೆಯಲ್ಲಿ ಅಕ್ಕ ಪಕ್ಕ ಇರುವಂತಹ ವಾಸ ಸ್ಥಳಗಳ ಮುಂದೆ ಮೂತ್ರ ವಿಸರ್ಜನೆ ಮಾಡುವುದು, ವಾಂತಿ ಮಾಡುವುದು ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ತೊಂದರೆಯಾಗುತ್ತದೆ. ಹಾಗೂ ಅಕ್ಕ ಪಕ್ಕದ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಮನೆಯಿಂದ ಹೊರಗೆ ಬರಲು ಇರಿಸು ಮುರುಸಾಗಿರುತ್ತದೆ. ಇದಲ್ಲದೇ ನಶೆಯಲ್ಲಿ ತಮ್ಮ ವಾಹನಗಳನ್ನು ಅಕ್ಕ ಪಕ್ಕದ ಮನೆಗಳ ಮುಂದೆ ನಿಲ್ಲಿಸಿ ತೊಂದರೆ ಕೊಡುವುದು ಸಾಮಾನ್ಯವಾಗಿದೆ ಎಂದು ಕಿಡಿಕಾರಿದರು.ಈ ಹಿಂದೆ  ಬಡಾವಣೆ ಪೊಲೀಸ್ ಠಾಣೆಯಲ್ಲಿ ಖುದ್ದು ಈ ಮದ್ಯದ ಅಂಗಡಿ ಮಾಲೀಕರು  ಅಂಗಡಿಯನ್ನು ಸ್ಥಾಳಾಂತರಿಸುವುದಾಗಿ ಲಿಖಿತ ರೂಪದಲ್ಲಿ ಪತ್ರ ನೀಡಿದ್ದರು. ಆದರೂ ಸಹ ಅಬಕಾರಿ ಇಲಾಖೆಯವರು ಈ ಮಧ್ಯದ ಅಂಗಡಿಯನ್ನು ಸ್ಥಳಾಂತರಿಸದೆ ಪರವಾನಿಗೆಯನ್ನು ನವೀಕರಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಮದ್ಯದ ಅಂಗಡಿ ತೆರವು ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿಜಯಲಕ್ಷ್ಮಿ, ನಿರಂಜನ್, ನಿವೇದಿತಾ, ಸಚಿನ್, ಬಾಗೀರಥಿ, ಪಾಂಡುರಂಗ, ಸರೋಜಾ, ವಿಜಯಾ, ನಾಗರಾಜ್ ಸೋಗಿ, ವೀರೇಶ್ ಇತರರು ಇದ್ದರು.