ಕೃಷಿಗೆ ಪ್ರತ್ಯೇಕ ಬಜೆಟ್, ರೈತರ ಬೇಡಿಕೆ ಈಡೇರಿಸಲು ಆಗ್ರಹ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೦: ದೇಶದಲ್ಲಿ ಕೃಷಿಗಾಗಿ ಪ್ರತ್ಯೇಕ ಬಜೆಟ್ ರೂಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಲೋಕಸಭೆಯಲ್ಲಿ ಧ್ವನಿ ಎತ್ತಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿ, ಕೇಂದ್ರ, ರಾಜ್ಯ ಸರ್ಕಾರಗಳ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಸಂಯುಕ್ತ ಹೋರಾಟ-ಕರ್ನಾಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಸಂಸದರ ಕಚೇರಿಗೆ ಮನವಿ ಅರ್ಪಿಸಿತು.ನಗರದ ರೈತ ಸಂಘದ ಕಚೇರಿ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಸಂಸದರ ಗೃಹ ಕಚೇರಿ ಶಿವ ಪಾರ್ವತಿಯಲ್ಲಿ ಸಂಘಟನೆಯ ಮುಖಂಡರ ನೇತೃತ್ವದ ನಿಯೋಗವು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಕಚೇರಿಯಲ್ಲಿ ಸಂಸದರ ಆಪ್ತ ಸಹಾಯಕರಿಗೆ ಮನವಿ ಅರ್ಪಿಸಿ, ಮನವಿ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಲಾಯಿತು.ಸಂಘದ ಸಂಘಟನೆ ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರವು ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇರು. ಕೃಷಿ ಕಾರ್ಪೋರೇಟೀಕರಣ ಸರಿಯಲ್ಲ. ಕೃಷಿ ಉತ್ಪಾದನೆ, ವ್ಯಾಪಾರ ಮತ್ತು ಆಹಾರ ಸಂಸ್ಕರಣೆಯಲ್ಲಿ ಎಂಎನ್‌ಸಿಗಳಿಗೆ ಪ್ರವೇಶ ನೀಡಬಾರದು. ಮುಕ್ತ ವ್ಯಾಪಾರ ಒಡಂಬಡಿಕೆ ಮಾಡಿಕೊಳ್ಳಬಾರದು. ಭಾರತವು ಕೃಷಿಗೆ ಸಂಬಂಧಿಸಿದಂತೆ ಡಬ್ಲ್ಯುಟಿಓ ಒಪ್ಪಂದದಿಂದ ಹೊರ ಬರಬೇಕು ಎಂದು ಒತ್ತಾಯಿಸಿದರು.ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ಮಾಡಿ, ಭಾರತದ ಸಂವಿಧಾನದಲ್ಲಿ ಪ್ರತಿಷ್ಟಾಪಿಸಿರುವ ಬಲಿಷ್ಟ ರಾಜ್ಯಗಳು, ಬಲಿಷ್ಟ ಭಾರತ ಒಕ್ಕೂಟವಂಬ ಒಕ್ಕೂಟ ತತ್ವಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರಗಳ ತೆರಿಗೆ ಹಕ್ಕನ್ನು ಪುನರ್ ಸ್ಥಾಪಿಸಬೇಕು. ಸಹಕಾರ ಕ್ಷೇತ್ರವು ರಾಜ್ಯ ವಿಷಯವೆಂಬ ಸಾಂವಿಧಾನಿಕ ನಿಯಮಾವಳಿಗಳನ್ನು ಎತ್ತಿ ಹಿಡಿಯಬೇಕು. ಕೇಂದ್ರ ಸರ್ಕಾರದ ಸಹಕಾರ ಇಲಾಖೆಯನ್ನು ರದ್ಧುಪಡಿಸಬೇಕು ಎಂದು ಆಗ್ರಹಿಸಿದರು.
ಜನರ ಜೀವನೋಪಾರ ಮತ್ತು ಪ್ರಕೃತಿಯ ರಕ್ಷಣೆಗಾಗಿ ಭೂಮಿ, ನೀರು, ಅರಣ್ಯಗಳು ಹಾಗೂ ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳ ಕಾರ್ಪೋರೇಟ್ ಹತೋಟಿ ಮತ್ತು ಸರಕೀಕರಣ ಕೊನೆಗೊಳಿಸಬೇಕು. ಕೃಷಿಯ ರಕ್ಷಣೆ, ಮಳೆ ನೀರಿನ ವೈಜ್ಞಾನಿಕ ಸಂರಕ್ಷಣೆ-ಬಳಕೆ (ಮಳೆನೀರು ಕೊಯ್ಲು) ಅಭಿವೃದ್ಧಿ, ಜಲಾನಯನ ಪ್ರದೇಶಗಳ ಆಯೋಜನೆ ಹಾಗೂ ಜಲಮೂಲಗಳ ರಕ್ಷಣೆಗಾಗಿ ಹವಾಮಾನ ಬದಲಾವಣೆ ವಿಚಾರವನ್ನು ಸೂಕ್ತವಾಗಿ ನಿರ್ವಹಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.