ಅಚ್ಚ ಮನಸ್ಸಿನ ಸ್ವಚ್ಛ ಕನ್ನಡತಿ ಅಪರ್ಣಾಗೆ ಅಕ್ಷರ ನಮನ
ಅಚ್ಚ ಮನಸ್ಸಿನ ಸ್ವಚ್ಛ ಕನ್ನಡತಿ ಅಪರ್ಣಾ ಇನ್ನು ನೆನಪು ಮಾತ್ರ…..
ನಟಿ ನಿರೂಪಕಿ, ಕನ್ನಡಕ್ಕೆ ಪನ್ನೀರು ಸಿಂಪಡಿಸಿದ ಸಿರಿಗನ್ನಡದ ಒಡತಿ, ಪ್ರತಿಯೊಂದು ಸರ್ಕಾರಿ ಕಾರ್ಯಕ್ರಮದಲ್ಲೂ ಇವರದೇ ಕಾರುಬಾರು, ನಮ್ಮ ರಾಷ್ಟ್ರೀಯ ಹಬ್ಬಗಳ ಆಚರಣೆ, ಕರ್ನಾಟಕದಲ್ಲಿ, ರಾಷ್ಟ್ರದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಿ ಕಾರ್ಯಕ್ರಮ ನಡೆದರೂ ಸಹ ಅಪರ್ಣರವರ ಕನ್ನಡದ ಇಂಪಿನ ನಿರೂಪಣೆ ಕನ್ನಡ ತಿಳಿಯದ ಜನರಿಗೂ ಸಹ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವಂತಹ ಸ್ವಚ್ಛ ಭಾಷಾ ಕೌಶಲ್ಯವನ್ನು ಒಳಗೊಂಡಂತಹ ನಿರೂಪಣಾ ಸಾಧಕಿ ನಮ್ಮ ನಿಮ್ಮೆಲ್ಲರ ಮನೆಮಗಳು ಅಪರ್ಣ.ನಟನಾ ಲೋಕದಲ್ಲಿ ಬಂದರೆ ಸಕಲಕಲಾವಲ್ಲಭೆ, ದಾರಾವಾಹಿ, ಸಿನಿಮಾ ಹೀಗೆ ಹತ್ತು ಹಲವಾರು ಕೌಶಲ್ಯವನ್ನು ಒಳಗೊಂಡಂತಹ ಚತುರೆ, ಕಾಮಿಡಿ ಪಾತ್ರದಲ್ಲೂ ಸಹ ಅವರು ಕಾಣಿಸಿಕೊಂಡಿದ್ದಾರೆ. ಅವರ ಕನ್ನಡದ ವಿಶೇಷತೆ ಅಂದ್ರೆ ಅದರಲ್ಲೊಂದು ಸ್ಪಷ್ಟತೆ ಕನ್ನಡ ಪದಗಳೇ ಪನ್ನೀರು ಹಾಕಿ ತೊಳೆದಂತಹ ಮಾತು ಎಲ್ಲರೂ ಮಾತನಾಡುವಾಗ ಅಲ್ಲೇಲ್ಲೋ ಕೆಲವು ಸಾಲುಗಳು ಮುಖ್ಯ ಅನಿಸಬಹುದು ಆದರೆ ಅಪರ್ಣ ಮಾತಾಡುವಾಗ ಆಡುವ ಪ್ರತಿ ಮಾತು ಮುಖ್ಯವೇ ಅನಿಸುವಂತದ್ದು ಎಲ್ಲಾ ವಾಕ್ಯಗಳಿಗೂ ಅಡಿಗೆರೆ ಹಾಕಿ ಇಟ್ಟಂತೆ ಇರುತ್ತಿತ್ತು.ಕನ್ನಡ ನಾಡಿಗೆ ಕನ್ನಡವನ್ನೇ ಹೆಚ್ಚಾಗಿ ತಂದವರು ಕನ್ನಡವನ್ನು ಹೀಗೆ ಮಾತಾಡಬೇಕು ಅಂತನಿಸುವಂತೆ ಹಾಡುವವರು, ಎಲ್ಲಿ ಹೋದರೂ ಕನ್ನಡ ಅವರ ಬಾಯಲ್ಲಿ ನಲಿಯುತ್ತಿತ್ತು ,ಜೊತೆಗೆ ಪ್ರತಿ ಕಾರ್ಯಕ್ರಮದಲ್ಲೂ ಡಿವಿಜಿ ಯವರ ಸಾಲು ಕೆ.ಎಸ್ ನರಸಿಂಹ ಸ್ವಾಮಿ ಅವರ ಸಾಲು ಹೀಗೆ ಅರ್ಥಪೂರ್ಣತೆ ಉದ್ದೇಶಿಸುತ್ತಿರುತ್ತಿತ್ತು, ಆ ಕಾರ್ಯಕ್ರಮದಲ್ಲಿ ಯಾರೋ ಮಾತನಾಡುತ್ತಿದ್ದರೆ ಅವರೇ ಸಾಂಸ್ಕೃತಿಕ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು ಆ ಸಂದರ್ಭದಲ್ಲಿ ನಮ್ಮನ್ನು ಯಾವುದೋ ವಿಚಾರ ಪ್ರಭಾವಿಸುತ್ತಿದೆ ಎನಿಸುವಷ್ಟು. ಅದಕ್ಕೆ ತಕ್ಕಂತೆ ಸ್ಪಷ್ಟವಾಗಿ ಜೋಡಿಸಿರುವಂತೆ ಅನಿಸುವ ಸಾಲುಗಳನ್ನು ಹೇಳುತ್ತಿದ್ದರು ಅದಕ್ಕೆ ತಕ್ಕಂತೆ ಮನೆಯಲ್ಲಿ ಸಹ ಅವರು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಬರುತ್ತಿದ್ದರು…ಅಂತಹ ಕನ್ನಡದ‌ ಮನೆಮಗಳು‌ ಇನ್ನಿಲ್ಲ ಆದರೆ ಅವರ‌  ಕನ್ನಡದ ಕಂಪು ಮಾತ್ರ ಮರೆಯಾಗುವುದಿಲ್ಲ….ಮುಂದಿನ ನಿಲ್ದಾಣದಂತೆ ಮುಂದೆ ಸಾಗುತ್ತಲೇ ಇರುತ್ತದೆ.
– ಶ್ರೀಮತಿ ವಿಜಯಲಿಂಗರಾಜ್,ನಿರ್ದೇಶಕರು.ಕಲ್ಲಾವರ್ ಎಜುಕೇಶನಲ್‌ ಟ್ರಸ್ಟ್‌, ಬೆಂಗಳೂರು.