ಮಳೆಗಾಲದ ವೇಳೆ ಜಲಾವೃತ ಸಮಸ್ಯೆ : ಗಮನಹರಿಸುವುದೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ?
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜು. 19: ಶಿವಮೊಗ್ಗ ಮಹಾನಗರ ಪಾಲಿಕೆ 1 ನೇ ವಾರ್ಡ್ ಸೋಮಿನಕೊಪ್ಪ ಪ್ರದೇಶದ ಹಲವೆಡೆ ಕನಿಷ್ಠ ಮೂಲಸೌಕರ್ಯಗಳಾದ ಚರಂಡಿ, ರಸ್ತೆಯ ವ್ಯವಸ್ಥೆಯೂ ಇಲ್ಲವಾಗಿದೆ. ಪ್ರಸ್ತುತ ಬೀಳುತ್ತಿರುವ ಮಳೆಯಿಂದ ಜಲಾವೃತ ಸಮಸ್ಯೆ ತಲೆದೋರಿದೆ. ಮನೆಗಳ ಮುಂಭಾಗ ಮಳೆ ನೀರು ನಿಂತುಕೊಳ್ಳುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.ಮನೆಗಳ ಮುಂಭಾಗ ಮಳೆ ನೀರು ನಿಂತು ಕೊಳ್ಳುತ್ತಿರುವುದರಿಂದ ಸೊಳ್ಳೆ, ಕ್ರಿಮಿಕೀಟಗಳ ಹಾವಳಿ ವಿಪರೀತವಾಗಿದೆ. ನಾಗರೀಕರು ನಾನಾ ರೀತಿಯ ರೋಗಕ್ಕೆ ತುತ್ತಾಗುವಂತಾಗಿದೆ. ಇಷ್ಟೆಲ್ಲ ಅವ್ಯವಸ್ಥೆಯಿದ್ದರೂ ಇಲ್ಲಿಯವರೆಗೂ ಸಮಸ್ಯೆ ಪರಿಹಾರಕ್ಕೆ ಪಾಲಿಕೆ ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.‘ಮಳೆ ಹಾಗೂ ಕೊಳಚೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಕಲ್ಪಿಸುವಂತೆ, ಈಗಾಗಲೇ ಹಲವು ಬಾರಿ ಪಾಲಿಕೆ ಆಡಳಿತಕ್ಕೆ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಸೌಲಭ್ಯ ಕಲ್ಪಿಸಿಲ್ಲ. ಪ್ರಸ್ತುತ ಮಳೆಗಾಲದ ವೇಳೆ ಎಲ್ಲೆಂದರಲ್ಲಿ ಮಳೆ ನೀರು ನಿಂತುಕೊಳ್ಳುತ್ತಿದೆ. ನಮ್ಮ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ’ ಸ್ಥಳೀಯ ನಿವಾಸಿ ಮುಸ್ಸಿ ಗೌಡ್ರು ಆಕ್ರೋಶ ವ್ಯಕ್ತಪಡಿಸುತ್ತಾರೆ.