ಮಳೆಯಿಂದಾಗಿ 15 ಕ್ಕೂ ಹೆಚ್ಚು ಮನೆಗಳಿಗೆ ಹಾನಿ; ವಿಪತ್ತು ನಿರ್ವಹಣೆಗೆ ಸಜ್ಜಾದ ಜಿಲ್ಲಾಡಳಿತ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೦; ಮಲೆನಾಡು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು ದಾವಣಗೆರೆ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ‌. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಕರಿಬಸಜ್ಜಯ್ಯನ ಸ್ನಾನಘಟ್ಟ ಹಾಗೂ ಜವಳಘಟ್ಟ ಮುಳುಗಡೆಯಾಗಿದ್ದರೆ, ಉಕ್ಕಡಗಾತ್ರಿ-ಪತ್ತೆಪುರ ಸಂಪರ್ಕಿಸುವ ರಸ್ತೆ ಕಡಿತಗೊಂಡಿದೆ. ನದಿಯಲ್ಲಿ ವ್ಯಾಪಕವಾಗಿ‌ ನೀರು ಹರಿಯುತ್ತಿದ್ದು ನೂರಾರು ಎಕರೆ ಬೆಳೆಗಳು ಜಲಾವೃತಗೊಂಡಿದ್ದು ರೈತರು‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೇ ರೀತಿ ಹೊನ್ನಾಳಿಯ ಬಾಲರಾಜ್ ಘಾಟ್ ಹಾಗೂ ಹರಿಹರದ ಗಂಗಾ ನಗರದಲ್ಲಿ ನೀರು‌ ನುಗ್ಗುವ ಹಿನ್ನೆಲೆಯಲ್ಲಿ ಈಗಾಗಲೇ ಕಾಳಜಿ‌ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದ್ದು, ನದಿ‌ ಪಾತ್ರದ ಜನರು ನದಿಗೆ ಇಳಿಯದಂತೆ ಜಿಲ್ಲಾಡಳಿತ ಖಡಕ್ ಎಚ್ಚರಿಕೆ ನೀಡಿದೆ..
ತುಂಗಭದ್ರಾ ನದಿಯ ಜೊತೆಗೆ‌ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯೂ ಕೂಡ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಜಿಲ್ಲೆಯಾಧ್ಯಂತ 15 ಕ್ಕೂ ಮನೆಗಳಿಗೆ ಹಾನಿಯಾಗಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ ತಾಲೂಕು ಸೇರಿದಂತೆ ವಿವಿಧ ತಾಲೂಕಿನಲ್ಲಿ ಮನೆಗಳಿಗೆ ಹಾನಿಯಾಗಿದೆ. ಅಷ್ಟೇ ಅಲ್ಲದೇ ನದಿಯಲ್ಲಿ‌ ದಿನೇ ದಿನೇ ನೀರಿನ ಮಟ್ಟ ಹೆಚ್ಚುತ್ತಿದ್ದು ಜಿಲ್ಲಾಡಳಿತ ಈಗಾಗಲೇ ವಿಪತ್ತು‌ ನಿರ್ವಹಣೆಗೆ ಸಕಲ ಸಿದ್ದತೆ ಮಾಡಿಕೊಳ್ಳಲು ಸೂಚನೆ ನೀಡಿದ್ದು ವಿಪತ್ತು ನಿರ್ವಹಣೆಗೆ ಸಜ್ಜಾಗಿದೆ. ಒಟ್ಟಿನಲ್ಲಿ ನದಿ ಒಂದು‌ ಕಡೆ ಅವಾಂತರ ಸೃಷ್ಟಿಸಿದರೆ, ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಮತ್ತೋಂದು ರೀತಿ ಅವಾಂತರ ಸೃಷ್ಟಿಸಿದೆ.