ಬದಲಾದ ಕಾನೂನುಗಳನ್ನು ಅರಿಯುವುದು ತುಂಬಾ ಮುಖ್ಯ:ಮಾಲತಿ ಎಸ್. ರಶ್ಮಿ
ಕಲಬುರಗಿ:ಜು.20:ಬದಲಾವಣೆ ಜಗದ ನಿಯಮ. ಬದಲಾದ ಕಾನೂನುಗಳನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಮುಂದೆ ಸಾಗಿದಲ್ಲಿ ತುಂಬಾ ಅನುಕೂಲವಾಗಲಿದೆ ಎಂದು ಜಿಲ್ಲಾ ಗ್ರಾಹಕ ವೇದಿಕೆ ಆಯೋಗದ ಅಧ್ಯಕ್ಷೆ ಮಾಲತಿ ಎಸ್. ರಶ್ಮಿ ಹೇಳಿದರು.
ಶುಕ್ರವಾರ ಕೇಂದ್ರ ಸಂವಹನ ಇಲಾಖೆ ಹಾಗೂ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಜರುಗಿದ ಹೊಸ ಕ್ರಿಮಿನಲ್ ಕಾನೂನುಗಳ ಕುರಿತ ಒಂದು ದಿನದ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೌಶಲ್ಯ ತಕ್ಕಂತೆ ಕಾನೂನುಗಳು ಬದಲಾಗಬೇಕಿದೆ. ನೆಲದ ಕಾನೂನುಗಳನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದ ಅವರು ವಕೀಲರು ನೂತನ ಕಾಯ್ದೆಯನ್ನು ಅರಿತುಕೊಂಡು ಕಕ್ಷಿದಾರರಿಗೆ ನ್ಯಾಯ ದೊರಕಿಸುವ ಮತ್ತು ಸಮಾಜಮುಖಿ ಕೆಲಸಕ್ಕೆ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪೆÇಲೀಸ ಇನ್ಸ್‍ಪೆಕ್ಟರ್ ಮಹಾದೇವಪ್ಪ ದಿಡ್ಡಿನಮನಿ ಮಾತನಾಡಿ, ಹಳೇ ಐ.ಪಿ.ಸಿ ಮತ್ತು ನೂತನ ಭಾರತೀಯ ದಂಡ ಸಂಹಿತೆ ಕಾಯ್ದೆ-2023ರ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಹಳೆ ಕಾನೂನಿನಲ್ಲಿ 23 ಅಧ್ಯಾಯಗಳು 511 ಕಲಂಗಳು ಇದ್ದವು. ಹೊಸ ಕಾನೂನಿನಲ್ಲಿ 20 ಅಧ್ಯಾಯಗಳು ಹಾಗೂ 358 ಕಲಂಗಳಿವೆ. 20 ಕಲಂಗಳು ಹೊಸದಾಗಿ ಸೇರ್ಪಡೆಯಾಗಿದ್ದರೆ ಅನಗತ್ಯ 19 ಕಲಂಗಳನ್ನು ತೆಗೆದು ಹಾಕಲಾಗಿದೆ ಎಂದರು.
ಎರಡನೇ ತಾಂತ್ರಿಕ ಟೆಕ್ನಿಕಲ್ ಸೆಷನ್ಸ್‍ನಲ್ಲಿ ಕಲಬುರಗಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಗಿರೀಶ ದೇಶಪಾಂಡೆ ಅವರು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ-2023ರ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ನೂತನ ಕಾನೂನುಗಳ ಮುಖ್ಯ ಉದ್ದೇಶ ನೊಂದ ವ್ಯಕ್ತಿಗೆ ಸಾಂತ್ವಾನ ಅಥವಾ ನ್ಯಾಯ ಕೊಡಿಸುವುದೇ ಆಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್. ಚಂದ್ರಶೇಖರ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾನೂನು ನಿಂತ ನೀರಲ್ಲ ಹರಿಯುವ ನದಿ ಇದ್ದಂತೆ. ಸಮಾಜ ಬದಲಾದಂತೆ ಕಾನೂನುಗಳು ಸಹ ಬದಲಾಗಬೇಕೆಂದು ಒತ್ತಿ ಹೇಳಿದ ಅವರು, ಪ್ರತಿ ವ್ಯಕ್ತಿ ನೂತನ ಕಾನೂನು ಅರಿಯುವುದು ಆದ್ಯ ಕರ್ತವ್ಯ. ವಿಶೇಷವಾಗಿ ವಕೀಲರಾದವರು ಸರಿಯಾಗಿ ತಿಳಿದುಕೊಂಡು ಕಕ್ಷಿದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕೆಂದರು.
ಸಿದ್ದಾರ್ಥ ಕಾನೂನು ಮಹಾವಿದ್ಯಾಲಯ ಐ.ಕ್ಯೂ.ಎ.ಸಿ ಸಯೋಜಕಿ ಅರ್ಪಣಾ ಶಿಂಧೆ, ಎನ್.ಎಸ್.ಎಸ್. ಸಂಯೋಜಕ ತಿಪ್ಪೇಸ್ವಾಮಿ ಎಸ್., ಕೇಂದ್ರ ಸಂವಹನ ಇಲಾಖೆಯ ಕಲಬುರಗಿ ಕ್ಷೇತ್ರ ಪ್ರಚಾರದ ಸಹಾಯಕ ನಾಗಪ್ಪ ಅಂಬಾಗೋಳ ಸೇರಿದಂತೆ ವಕೀಲರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣ ಪ್ರಯುಕ್ತ ಕಾಲೇಜಿನಲ್ಲಿ ಆಯೋಜಿಸಿದ ಭಾಷಣ ಸ್ಪರ್ಧೇಯಲ್ಲಿ ವಿಜೇತ 10 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಪೂಜಾ ರಾಘವೇಂದ್ರ ಸ್ವಾಗತಿಸಿದರೆ, ಸುನೀಲ ಕಾರ್ಯಕ್ರಮ ನಿರೂಪಿಸಿದರು.