ರಾಸಾಯನಿಕ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಿ
ಹುಮನಾಬಾದ್:ಜು.20:ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ, ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಶುಕ್ರವಾರ ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಕಾರ್ಯದರ್ಶಿ ನವೀನ ಬತಲಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಿಗೆ ಬರೆದ ಮನವಿ ಪತ್ರ ತಹಸೀಲ್ದಾರ್ ಅಂಜುಮ್ ತಬಸುಮ್‍ಗೆ ಸಲ್ಲಿಸಲಾಯಿತು.
ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಕಾರ್ಯದರ್ಶಿ ನವಿನ ಬತಲಿ ಮಾತನಾಡಿ, ರಾಸಾಯನಿಕ ಕಾರ್ಖಾನೆಗಳಿಂದ ಹಳ್ಳಕ್ಕೆ ರಾಸಾಯನಿಕ ಮಿಶ್ರಿತ ಕೊಳಚೆ ಹರಿದು ಬಿಡುತ್ತಿರುವ ಪರಿಣಾಮ ಮಾಣಿಕ ನಗರ, ಗಡವಂತಿ, ಧುಮ್ಮನಸೂರ ಗ್ರಾಮಗಳು ಸೇರಿ ಹುಮನಾಬಾದ್ ಪಟ್ಟಣದ ಜನರು ಸಾಕಷ್ಟು ತೊಂದರೆ ಅನುಭವಿಸುವಂತ ವಾತಾವರಣ ನಿರ್ಮಾಣವಾಗಿದೆ. ಹೊಲಗಳಲ್ಲಿ ದನ ಕರುಗಳಿಗೆ ನೀರು ಕುಡಿಸಬೇಕಾದರೆ ನೀರು ಸಿಗುತ್ತಿಲ್ಲ. ಕೊಳವೆ ಬಾವಿ ಹಾಗೂ ತೆರೆದ ಬಾವಿಯಲ್ಲೂ ಕೂಡಾ ರಾಸಾಯನಿಕ ಮಿಶ್ರಿತ ನೀರು ಬರುತ್ತಿವೆ. ಹೀಗಾಗಿ ಸಚಿವರು ಇತ್ತ ಹೆಚ್ಚಿನ ಗಮನ ಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕ ಗೌರವ ಅಧ್ಯಕ್ಷ ಸಂದೀಪ ಬತಲಿ ಮಾತನಾಡಿ, ರಾತ್ರಿ ಹೊತ್ತಲ್ಲಿ ಕಾರ್ಖಾನೆಗಳಿಂದ ವಿಷಕಾರಿ ಅನಿಲ ಹೊರಬಿಡುತ್ತಿದ್ದಾರೆ ಇದರಿಂದ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮದ ಜನರಿಗೆ ಉಸಿರಾಟದ ತೊಂದರೆಯಾಗುತ್ತಿದೆ. ಜನರ ಆರೋಗ್ಯ ಹಿತದೃಷ್ಟಿಯಿಂದ ಸಂಬಂಧ ಪಟ್ಟ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ತಾಲೂಕ ಅಧ್ಯಕ್ಷ ಅವಿನಾಶ ಧುಮ್ಮಾಳೆ, ಪ್ರಮುಖರಾದ ಉಮೇಶ ದಾಡಗಿ, ಜೈಭೀಮ ಡಾಂಗೆ, ಮಹಾದೇವ ಗೌಳಿ, ಅಭಿಷೇಕ, ಧನರಾಜ ಸಿಂಧನಕೇರಾ, ಭಾಸ್ಕರ್, ಕಾರ್ತಿಕ, ಪ್ರವೀಣ ಗುತ್ತೆದಾರ, ಕೈಲಾಸ ಇದ್ದರು.