ಪ್ರೀತಿಸುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ಜೈಲು ಶಿಕ್ಷೆ
ಕಲಬುರಗಿ,ಜು.20-ಪ್ರೀತಿಸುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಇಲ್ಲಿನ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು 45 ಸಾವಿರ ರೂ.ದಂಡ ವಿಧಿಸಿದೆ.
2022ನೇ ಸಾಲಿನಲ್ಲಿ ಆರೋಪಿ ಚಿಂಚೋಳಿ ತಾಲ್ಲೂಕಿನ ವಜೀರಗಾಂವ ಗ್ರಾಮದ ಅಜಯ ತಂದೆ ರೇವಣಸಿದ್ದಪ್ಪ ಹೊಸಮನಿ ಕಾಲೇಜಿಗೆ ಹೋಗುತ್ತಿದ್ದ ಬಾಲಕಿಯ ಬೆನ್ನು ಬಿದ್ದು ಪ್ರೀತಿಸುವುದಾಗಿ ನಂಬಿಸಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಈ ವಿಷಯ ಯಾರಿಗಾದರು ಹೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಾಲಕಿಗೆ ಹೆದರಿಸಿದ್ದ. ನಂತರ ಬಾಲಕಿಯನ್ನು ಹೈದ್ರಾಬಾದಗೆ ಕರೆದುಕೊಂಡು ಹೋಗಿ ಒಂದು ತಿಂಗಳು ಆಕೆಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದ. ನಂತರ ಬಾಲಕಿ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ಬೈಯ್ದು ಆಕೆಯನ್ನು ಊರಿಗೆ ತಂದು ಬಿಟ್ಟಿದ್ದ. ಈ ಸಂಬಂಧ ಬಾಲಕಿ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು. ತನಿಖಾಧಿಕಾರಿಗಳಾದ ಮಹಾಂತೇಶ ಬಿ.ಪಾಟೀಲ ಮತ್ತು ಜಗದೀಶ ಕೆ.ಜಿ.ಅವರು ಪ್ರಕರಣದ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಮತ್ತು 45 ಸಾವಿರ ರೂ.ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹಯಾಳಪ್ಪ ಎನ್.ಬಳಬಟ್ಟಿ ಅವರು ವಾದ ಮಂಡಿಸಿದ್ದರು.