ಖಾಸ್ಗತರ ಗಂಗಸ್ಥಳದಲ್ಲಿ ಸಾಗರೋಪಾದಿಯಲ್ಲಿ ಭಕ್ತಸಮೂಹ
ತಾಳಿಕೋಟೆ:ಜು.20: ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೋತ್ಸವ ನಿಮಿತ್ಯ ಶುಕ್ರವಾರರಂದು ಜರುಗಿದ ಶ್ರೀ ಖಾಸ್ಗತ ಮಹಾಶಿವಯೋಗಿಗಳ ಗಂಗಸ್ಥಳ ಹಾಗೂ ಶ್ರೀಗಳ ಭವ್ಯ ಮೆರಣಿಗೆಯ ಮಹಾ ಕಾರ್ಯಕ್ರಮವು ಶ್ರೀ ಮಠದ ನೂತನ ಪೀಠಾಧಿಪತಿ ಶ್ರೀ ಸಿದ್ದಲಿಂಗದೇವರ ಅಧ್ಯಕ್ಷತೆಯಲ್ಲಿ ಭಕ್ತಿಭಾವದಿಂದ ಜರುಗಿ ಭಾವೈಕ್ಯತೆಗೆ ಸಾಕ್ಷೀಯಾಯಿತು.
ಮುಂಜಾನೆ 8 ಘಂಟೆಗೆ ಶ್ರೀ ಖಾಸ್ಗತ ಮಠದಿಂದ ಆನೆ ಅಂಬಾರಿ ಮೇಲೆ ಶ್ರೀ ಖಾಸ್ಗತರ ಬೆಳ್ಳಿಯ ಮಹಾಮೂರ್ತಿಯ ಮಹಾ ಮೆರವಣಿಗೆ, ಶ್ರೀ ವಿರಕ್ತಮಹಾಸ್ವಾಮಿಗಳ ಭಾವಚಿತ್ರದ ಭವ್ಯ ಮೆರವಣಿಗೆ ಅಲ್ಲದೇ ಅಶ್ವಮೇದ ಬೆಳ್ಳಿಯ ರಥದಲ್ಲಿ ಕುಳಿತ ಶ್ರೀ ಮಠದ ನೂತನ ಪೀಠಾಧಿಪತಿಯಾದ ಶ್ರೀ ಸಿದ್ದಲಿಂಗದೇವರು ಅಲ್ಲದೇ ಪಲ್ಲಕ್ಕಿ ಹಾಗೂ ರಥದ ಕಳಸದ ಮಹಾ ಮೆರವಣಿಗೆಯು ಪಟ್ಟಣದ ಪ್ರಮುಖ ಬಡಾವಣೆಯಲ್ಲಿ ಹಾಯ್ದು ಪುರಾತನ ಭಾವಿಯಾದ ಭೀಮನಭಾವಿಯಲ್ಲಿ ಗಂಗಸ್ಥಳ ಮಹಾ ಕಾರ್ಯಕ್ರಮ ಮುಗಿಸಿಕೊಂಡು ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಯಲ್ಲಿ ಹಾಯ್ದು ಶ್ರೀಮಠ ತಲುಪಿತು.
ಈ ಗಂಗಸ್ಥಳ ಉತ್ಸವ ನಿಮಿತ್ಯ ಯಾವದೇ ಜಾತಿಬೇಧವೆನ್ನದೇ ಸುಮಂಗಲೆಯರು ತಮ್ಮ ಮನೆಯ ಅಂಗಳದಲ್ಲಿ ರಂಗೋಲಿ ವಿವಿಧ ನಮೂನೆಯ ಚಿತ್ರವನ್ನು ಬಿಡಿಸಿದ್ದಲ್ಲದೇ ಮನೆ ಮನೆಗೆ ತಳಿರು ತೋರಣ ಕಟ್ಟಿ ಈ ಮಹಾ ಮಹಾತ್ಮರ ಭವ್ಯ ಮರವಣಿಗೆಯನ್ನು ಸ್ವಾಗತಿಸಿರುವದು ಇಡೀ ಭಕ್ತಸಮೂಹಕ್ಕೆ ಆನಂದವನ್ನುಂಟುಮಾಡಿದ್ದು ಕಂಡಿಬಂದಿತು.
ಕಲಾ ತಂಡಗಳಿಂದ ಐತಿಹಾಸಿಕ ಮೆರಗು:
ಅಂಭಾರಿಯ ಮೇರಣಿಗೆಯುದ್ದಕ್ಕೂ ವಿವಿಧ ವಾಧ್ಯವೈಭವಗಳು ಅಲ್ಲದೇ ಗೊಂಬೆ ಕುಣಿತ, ಕರಡಿ ಮಜಲು, ಸನಾದಿಯ ನಾದ, ಶ್ರೀ ಹನುಮಾನ ವೇಷದಾರಿಯ ಕುಣಿತ ಒಳಗೊಂಡು ವಿವಿಧ ಕಲಾ ತಂಡಗಳು ಭಾಗವಹಿಸಿದ್ದವಲ್ಲದೇ ಅಥಣಿ ತಾಲೂಕಿನ ಶೇಡಬಾಳದ ಜೈನ ಆಶ್ರಮದ ಪದ್ಮಾವತಿ ಎಂಬ ಆನೆಯ ಅಂಭಾರಿಯ ಮೇಲೆ ಶ್ರೀ ಖಾಸ್ಗತರ ಬೆಳ್ಳಿ ಮೂರ್ತಿಯ ಮೆರವಣಿಗೆ ಹಾಗೂ ಅಶ್ವಮೇಧ ರಥದಲ್ಲಿ ಶ್ರೀಗಳ ಮೇರವಣಿಗೆ ಐತಿಹಾಸಿಕ ತಾಳಿಕೋಟೆ ಪಟ್ಟಣದ ರಾಜ ವೈಭವವನ್ನು ಮರುಕಳಿಸುಂತೆ ಎದ್ದು ಕಾಣುತ್ತಿತ್ತು. ಮಹಾ ವೈಭವದ ಗಂಗಸ್ಥಳ ಕಾರ್ಯಕ್ರಮದಲ್ಲಿ ನಡೆದ “ಓಂ ನಮಃ ಶಿವಾಯ” ಎಂಬ ಶಿವಭಜನೆಯು ಪುರಾತನ ಕಾಲದ ರಾಜ ವೈಭವವನ್ನು ಮರುತಂದಂತೆ ಭಾಸವಾಗುತ್ತಿತ್ತು. ಮೆರವಣಿಗೆಯಲ್ಲಿ ಅನೇಕ ಜನರು ಮನೆಯ ಹಾಗೂ ಅಂಗಡಿಗಳ ಮೇಲಿಂದ ಶ್ರೀ ಖಾಸ್ಗತರ ಬೆಳ್ಳಿ ಮೂರ್ತಿಗೆ ಹಾಗೂ ವಿರಕ್ತಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಮೆರವಣಿಗೆಯಲ್ಲಿ ಅನ್ನ ಪ್ರಸಾದ :
ಮೆರವಣಿಗೆಯಲ್ಲಿ ರಾಜವಾಡೆ ಕಿಂಗ್ಸ್ ಗೆಳೆಯರ ಬಳಗ, ಎಬಿಡಿ ಪೌಂಡೇಶನ್ ಗೆಳೆಯರ ಬಳಗ, ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಅಭಿಮಾನಿ ಬಳಗ, ನಮ್ಮ ಗೆಳೆಯರ ಬಳಗ, ಮತ್ತು ಸಜ್ಜನ ಸಮಾಜಬಾಂದವರು, ಭಗತ್‍ಸಿಂಗ್ ಗೆಳೆಯರ ಬಳಗ, ಸಹಹೃದಯ ಗೆಳೆಯರ ಬಳಗ, ಒಳಗೊಂಡು ಅನೇಕ ಯುವಕ ಸಂಘದವರು ದಾರಿಯುದ್ದಕ್ಕೂ ಮಾದಲಿ, ರೈಸ್ ಬಾತ್, ಶೀರಾ, ಕೇಸರಿಭಾತ, ಕ್ಯಾರೇಟ್ ಹಲ್ವಾ, ಬದಾಮಿ ಹಾಲು, ಚಹಾ ಬಿಸ್ಕೀಟ್ ಅಲ್ಲದೇ ವಿವಿಧ ತರಹದ ಪ್ರಸಾದದ ಸೇವೆಯನ್ನು ಏರ್ಪಡಿಸಿದರೆ ಇನ್ನೂ ಕೆಲವರು ಕುಡಿಯುವ ನೀರಿನ ಪಾಕೇಟ್ ಮತ್ತು ಬಾಟಲ್‍ಗಳನ್ನು ಭಕ್ತಾಧಿಗಳಿಗೆ ನೀಡಿ ದಣಿವನ್ನು ತಣಿಸಿದರು.
ಮುಂಜಾನೆ 8 ಘಂಟೆಗೆ ಪ್ರಾರಂಭಗೊಂಡ ಈ ಗಂಗಸ್ಥಳ ಮಹಾ ಮೆರವಣಿಗೆಯು ವಿವಿಧ ಪ್ರಮುಖ ಬಡಾವಣೆಗಳಲ್ಲಿ ಹಾಯ್ದು ಶ್ರೀ ಖಾಸ್ಗತೇಶ್ವರ ಮಠಕ್ಕೆ ಮದ್ಯಾಹ್ನ 2-30 ಘಂಟೆಗೆ ಆಗಮಿಸಿತು. ಜಾತ್ರೋತ್ಸವ ನಿಮಿತ್ಯ ಚಾಲಕರ ಸಂಘದಿಂದ ರಕ್ತದಾನ ಶಿಬಿರವನ್ನು ಆಯೋಜಿಸಿ ಎಲ್ಲದಾನಗಳಲ್ಲಿ ರಕ್ತದಾನ ಮಹಾದಾನ ಎಂಬುದನ್ನು ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಮಹಾ ಕಾರ್ಯಕ್ರಮದಲ್ಲಿ ಮುಂಬಯಿ, ಪುಣೆ, ಹೈದ್ರಾಬಾದ, ಅಲ್ಲದೇ ಹುಬ್ಬಳ್ಳಿ, ಧಾರವಾಡ, ಬೆಂಗಳೂರ, ಗುಲಬರ್ಗಾ, ಮಹಾ ನಗರಗಳಿಂದಲೂ ಸಾವಿರಾರೂ ಸಂಖ್ಯೆಯಲ್ಲಿ ಭಕ್ತ ಸಮೂಹ ಪಾಲ್ಗೊಂಡು ಭಕ್ತಿಭಾವ ಮೆರೆದರು.
ಈ ಮೆರವಣಿಗೆಯಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವರಿಯಾದ ಶ್ರೀ ವೇ|| ಮುರುಘೇಶ ವಿರಕ್ತಮಠ, ವೇ|| ವಿಶ್ವನಾಥ ವಿರಕ್ತಮಠ, ಮೊದಲಾದವರು ಪಾಲ್ಗೊಂಡಿದ್ದರು.
ಪೊಲೀಸ್ ಬಂದೋಬಸ್ತ : ಈ ಬೃಹತ್ ಮೆರವಣಿಗೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಡು ಬರಲು ಪೊಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‍ಐ ರಾಮನಗೌಡ ಸಂಕನಾಳ, ಆರ್.ಎಸ್.ಭಂಗಿ, ಅವರು ತಮ್ಮ ಸಿಬ್ಬಂದಿಯೊಂದಿಗೆ ಯೋಗ್ಯ ಬಂದೋಬಸ್ತ ಏರ್ಪಡಿಸಿದ್ದರು.