ಸಮಾಜದಲ್ಲಿ ಬಿರುಕು ತರಲು ಯತ್ನಿಸುವವರ ವಿರುದ್ದ ಕ್ರಮಕ್ಕೆ ಮನವಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಜು,20- ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಬಿ. ಪಂಚಾಕ್ಷರಪ್ಪ ಮತ್ತು ಅವರ ತಂಡದವರು ಅನಾವಶ್ಯಕ ಗೊಂದಲ ಸೃಷ್ಟಿಸುತ್ತಿದ್ದು ಅವರುಗಳ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಂತೆ  ಬೈಲೂರು ಗ್ರಾಮಸ್ಥರು ಚುನಾವಣಾ ಅಧಿಕಾರಿಗೆ ಮತ್ತು ಕುರುಗೋಡು ಪೋಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಈಗಾಗಲೇ ಮಹಾ ಸಭಾ ಬೈಲಾದಡಿಯಲ್ಲಿ ನೊಂದಾಯಿತರಾಗಿರುವ ಸದಸ್ಯರ ಬಗ್ಗೆ ಅವರು ವೀರಶೈವ ಲಿಂಗಾಯತರಲ್ಲವೆಂದು ಅನಾವಶ್ಯಕ ಉಯಿಲೆಬ್ಬಿಸಿ ಮಹಾಸಭಾದ ಅಜೀವ ಸದಸ್ಯರನ್ನು ಅವಮಾನಿಸಿರುತ್ತಾರೆ.
ಅಖಿಲ ಭಾರತ ವೀರಶೈವ ಮಹಾಸಭಾ ನಿಯಮಾವಳಿಯನ್ವಯ ವೀರಶೈವ ಲಿಂಗಾಯತರು, ಲಿಂಗವಂತರು ಮತ್ತು ಲಿಂಗಧಾರಿಗಳೆಲ್ಲರು ಮಹಾಸಭಾ ಸದಸ್ಯರಾಗಬಹುದು. ವೀರಶೈವ ಲಿಂಗಾಯತ ಧರ್ಮದ ಸಿದ್ಧಾಂತವನ್ನು ಒಪ್ಪಿ ಬರುವ ಲಿಂಗಾಧಾರಿಗಳು ಸಹ ಮಹಾಸಭಾದ ಸದಸ್ಯರಾಗಬಹುದಾಗಿದೆ. ಆದರೆ ಚುನಾವಣೆಯ ಸಂದರ್ಭದಲ್ಲಿ  ಪಂಚಾಕ್ಷರಪ್ಪ ಮತ್ತು ಅವರ ತಂಡದವರು ವಿನಾಕಾರಣ ಪತ್ರಿಕಾಗೋಷ್ಠಿ ಮಾಡಿ.
ಮಹಸಭಾದ ಆಜೀವ ಸದಸ್ಯರುಗಳ ಮತ್ತು ನಮ್ಮಗಳ ತೇಜೋವಧೆ ಮಾಡಿದ್ದಾರೆ. ಇದನ್ನು ತಾವುಗಳು ಗಂಭೀರವಾಗಿ ಪರಿಗಣಿಸಿ  ಚುನಾವಣಾ ನೀತಿ ಸಂಹಿತೆಯನ್ವಯ ಶಿಸ್ತುಕ್ರಮ ಜರುಗಿಸುವ ಮೂಲಕ ಅವರೆಲ್ಲರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಕೋರಿದ್ದಾರೆ.
ಪಂಚಾಕ್ಷರಪ್ಪ ಅವರನ್ನು ಬೆಂಬಲಿಸುತ್ತಿರುವ ಶ್ರೀಕೋಳೂರು ಚಂದ್ರಶೇಖರಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಲಿಂಗಾಯತರಲ್ಲದವರಿಗೆ ಹಾಲಿ ಮಹಾಸಭಾದ ಜಿಲ್ಲಾ ಅಧ್ಯಕ್ಷ  ಚಾನಳ್ ಶೇಖರ್ ಅವರು ಮಹಾಸಭಾದ ಸದಸ್ಯತ್ವ ನೀಡಿರುತ್ತಾರೆಂದು ವ್ಯರ್ಥ ಮತ್ತು ಆಧಾರ ರಹಿತ ಆರೋಪ ಮಾಡುವ ಮೂಲಕ ಚುನಾವಣೆಯಲ್ಲಿ  ಸುಳ್ಳು ಹೇಳುವ ಮೂಲಕ ಮತದಾರರ ದಾರಿ ತಪ್ಪಿಸುತ್ತಿದ್ದಾರೆ. ಅಲ್ಲದೇ ಈ ವಿಷಯವಾಗಿ ಚುನಾವಣೆಯ ದಿನ ಮತಗಟ್ಟೆಯಲ್ಲಿ ಘರ್ಷಣೆಯಾಗಬಹುದೆಂಬ ಹೇಳಿಕೆ ನೀಡಿರುತ್ತಾರೆ. ಮತ್ತು ಹಿಂಸಾಚಾರಕ್ಕೆ ಚಂದ್ರಶೇಖರಗೌಡ ಪ್ರಚೋದಿಸುತ್ತಿರುವರು. ಆದ್ದರಿಂದ ಇವರ ಮೇಲೆಯೂ ಶಿಸ್ತು ಕ್ರಮ ಜರುಗಿಸಬೇಕು ಎಂದಿದ್ದಾರೆ.