ದಿ. ರಾಮಚಂದ್ರ ವೀರಪ್ಪ ಆರ್ಯ ಕೊಡುಗೆ ಅಪಾರ:ಸುಭಾಷ ಕಲ್ಲೂರ
ಹುಮನಾಬಾದ್ :ಜು.20: ಜನ ಮೆಚ್ಚಿದ ನಾಯಕ, ಪರಿಸರ ಪ್ರೇಮೆ ಮಾಜಿ ಸಂಸದ ದಿ. ರಾಮಚಂದ್ರ ವೀರಪ್ಪ ಆರ್ಯ ಆದರ್ಶಗಳನ್ನು ಪ್ರತಿಯೊಬ್ಬ ರಾಜಕಾರಣಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರಬೇಕು ಎಂದು ಬಿಎಸ್‍ಎಸ್‍ಕೆ ಅಧ್ಯಕ್ಷ ಸುಭಾಷ ಕಲ್ಲೂರ ಹೇಳಿದರು.
ತಾಲೂಕಿನ ಧುಮ್ಮನಸೂನ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಜಿ ಸಂಸದ ದಿ. ರಾಮಚಂದ್ರ ವೀರಪ್ಪ ಆರ್ಯ ಅವರ ಸಮಾಧಿ ಸ್ಥಳದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಮಚಂದ್ರ ವೀರಪ್ಪ ಆರ್ಯ ಅವರ 20ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದಿ. ರಾಮಚಂದ್ರ ವೀರಪ್ಪ ಆರ್ಯ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ದೇಶದ ಸ್ವಾತಂತ್ರ??ಕ್ಕೆ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಮಹಾನ ಹೋರಾಟಗಾರನ ವಿಚಾರಗಳು ಎಲ್ಲರೂ ಪಾಲಿಸಬೇಕು ಎಂದು ಸಲಹೆ ನೀಡಿದರು.
ಪರಿಸರವಾದಿ ಶೈಲೇಂದ್ರ ಕಾವಡಿ ಮಾತನಾಡಿ, ಆರ್ಯ ಅವರು ನಿಧನರಾದ ಸಂದರ್ಭದಲ್ಲಿ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿ ಅಂದಿನ ಉಸ್ತುವಾರಿ ಸಚಿವರು ಭರವಸೆ ನೀಡಿದರು. ಕಳೆದ 20 ವರ್ಷಗಳಿಂದ ಸ್ಮಾರಕ ನಿರ್ಮಾಣ ಕಾರ್ಯ ಕೈಗೊಳ್ಳದೇ ನೆನೆಗುದಿಗೆ ಬಿದ್ದಿದೆ. ಶಾಸಕ ಹಾಗೂ ಸಂಸದರಾಗಿ ಕ್ಷೇತ್ರದಲ್ಲಿ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಜನಮನ್ನಣೆಗೆ ಹೆಸರುವಾಸಿಯಾಗಿದ್ದರು. ಹೀಗಾಗಿ ಈ ಮಹಾನ ವ್ಯಕ್ತಿಯ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಉಸ್ತುವಾರಿ ಸಚಿವ, ಸಂಸದ ಸೇರಿದಂತೆ ಶಾಸಕರು ಶ್ರಮವಹಿಸಬೇಕು ಎಂದರು.
20ನೇ ಪುಣ್ಯಸ್ಮರಣೆ ಅಂಗವಾಗಿ ಸಮಾಧಿ ಸ್ಥಳದಲ್ಲಿ ಬಸವರಾಜ ಆರ್ಯ ಹಾಗೂ ಪ್ರೇಮಲತಾ ಆರ್ಯ ನೇತೃತ್ವದಲ್ಲಿ ಪರಿವಾರದ ಸದಸ್ಯರು ಸೇರಿ ಆರ್ಯ ಸಮಾಜದ ನಿಯಮದಂತೆ ಹೋಮ, ಹವನ ಕಾರ್ಯಕ್ರಮಗಳನ್ನು ಕೈಗೊಂಡು ಪೂಜೆ ಸಲ್ಲಿಸಿದರು. ವಿವಿಧ ಕಲಾ ತಂಡಗಳಿಂದ ಭಜನೆ ಕೀರ್ತನೆಗಳು ಜರುಗಿದವು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಗಾದಗಿ, ಪುರಸಭೆ ಸದಸ್ಯ ರಮೇಶ ಕಲ್ಲೂರ್, ಸುಭಾಷ ಆರ್ಯ, ಸುರೇಶ ಸೀಗಿ, ರಾಜು ಸಲಗಾರ, ಗಿರೀಶ ಪಾಟೀಲ್, ದಯಾನಂದ ಸ್ವಾಮಿ, ಗೋಪಾಲ ರಡ್ಡಿ, ಗಿರೀಶ ತುಂಬಾ, ಮಲ್ಲಿಕಾರ್ಜುನ್ ಮಹೇಂದ್ರಕರ್, ವಿರಪ್ಪ ಧುಮ್ಮನಸೂರ್, ಸೇರಿದಂತೆ ಅನೇಕರು ಇದ್ದರು.