ಸಮಾಜಮುಖಿಯಾಗಿ ಸೇವೆ ಸಲ್ಲಿಸುವ ಸಂಸ್ಥೆಗಳು ಹೆಚ್ಚಲಿ
ಕಲಬುರಗಿ:ಜು.20: ಸ್ವಾರ್ಥತೆಯೆ ಪ್ರಮುಖವಾಗಿರುವ ಪ್ರಸ್ತುತ ದಿನಗಳಲ್ಲಿ ಅತ್ಯಂತ ಬೆಲೆಯುಳ್ಳ, ಅಪರೂಪದ್ದು ಎಂದರೆ ಸಮಾಜ ಸೇವೆ. ಸಮಾಜದಲ್ಲಿರುವ ಅವಶ್ಯಕತೆಯಿರುವವರು, ಅಸಹಾಯಕರಿಗೆ ಸೇವೆ ನೀಡುವುದು, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣದ ಬಗ್ಗೆ ಜನಜಾಗೃತಿ, ಮಹನೀಯರ ಸಂದೇಶ ಸಮಾಜಕ್ಕೆ ಮುಟ್ಟಿಸುವುದು ಸೇರಿದಂತೆ ಮುಂತಾದ ಸಮಾಜಮುಖಿ ಕಾರ್ಯಗಳನ್ನು ನಿಸ್ವಾರ್ಥವಾಗಿ ಮಾಡುವ ಸಮಾಜ ಸೇವಕರು ಮತ್ತು ಅಂತಹ ಸಂಸ್ಥೆಗಳು ಹೆಚ್ಚಾಗಬೇಕಾಗಿದೆ ಎಂದು ಉಪನ್ಯಾಸಕ ಹಾಗೂ ಸಮಾಜ ಸೇವಕ ಎಚ್.ಬಿ.ಪಾಟೀಲ ಆಶಯ ವ್ಯಕ್ತಪಡಿಸಿದರು.
ನಗರದ ಎಂ.ಎಸ್.ಕೆ ಮಿಲ್ಲ್ ಪ್ರದೇಶದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜರುಗಿದ ‘ನಿಸರ್ಗ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ’ಯ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೋಟಬುಕ್ ಹಾಗೂ ಪೆನ್‍ಗಳ ವಿತರಣೆ ಮಾಡಿ, ನಂತರ ಮಾತನಾಡುತ್ತಿದ್ದರು.
ಸಮಾಜ ಸೇವಕ ಹಾಗೂ ನ್ಯಾಯವಾದಿ ಧೂಳಪ್ಪ ದ್ಯಾಮನಕರ್ ಮಾತನಾಡಿ, ನಮ್ಮ ಸಂಸ್ಥೆ ಸಮಾಜದಲ್ಲಿರುವ ಪ್ರತಿಭಾವಂತರನ್ನು ಗುರ್ತಿಸಿ, ಪ್ರೋತ್ಸಾಹಿಸುವುದು, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಶಿಕ್ಷಣ ಅಭಿವೃದ್ಧಿ ಸೇರಿದಂತೆ ಇನ್ನಿತರರ ಸೇವೆಗಳನ್ನು ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಕೀಲರುಗಳಾದ ಕೆ.ಎಂ.ಭರ್ಮಾ, ಶೈಲೆಂದ್ರ ಲಾಡೆ, ದಯಾನಂದ ತಳಕೇರಿ, ಶ್ರೀಕಾಂತ ನಂದಗಿರಿ, ಪ್ರಭು ಹೊಸಮನಿ, ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ರವಿ ಪಾಟೀಲ, ಶಂಭುಲಿಂಗ ಪಾಟೀಲ, ಪ್ರಕಾಶ ಕಟ್ಟಿಮನಿ, ಶಾಲೆಯ ಮುಖ್ಯ ಶಿಕ್ಷಕ ಹಣಮಂತ ರೇವನೂರ, ಶಿಕ್ಷಕರುಗಳಾದ ಸಿದ್ದರಾಮ ರಾಜಮಾನೆ, ಕಾಶಿಬಾಯಿ, ನೀಲಮ್ಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.