ಡೆಂಗ್ಯೂ: ಬೇವಿನ ಎಣ್ಣೆ ವಿತರಣೆ
ಧಾರವಾಡ,ಜು20: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆ ಪ್ರಕಾರ ಬೇವಿನ ಎಣ್ಣೆ ಜೊತೆಗೆ ಕೊಬ್ಬರಿ ಎಣ್ಣೆ ಸೇರಿಸಿ, ಪ್ರತಿ ದಿನ ಕೈ,ಕಾಲು ಮತ್ತು ದೇಹಕ್ಕೆ ಹಚ್ಚುವದರಿಂದ ಡೆಂಗ್ಯೂ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಆಪ್ ಸೆವೆನ್ ಹಿಲ್ಸ್ ಮತ್ತು ದೃಷ್ಟಿ ನಸಿರ್ಂಗ್ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಡೆಂಗ್ಯೂ ಮುಂಜಾಗೃತೆಯ ಜಾಗೃತಿ ಜಾಥಾ ಹಾಗೂ ರೋಟರಿ ಕ್ಲಬ್ ಆಪ್ ಸೆವೆನ್ ಹಿಲ್ಸ್ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ನೀಡಿದ ನೀಮ್ ಆಯಿಲ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಬೇವಿನ ಎಣ್ಣೆ ಹಚ್ಚುವದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಕಡಿಮೆ ಆಗುತ್ತವೆ. ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡೆಂಗ್ಯೂ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ನೀಮ್ ಆಯಿಲ್ ಹಚ್ಚಿಕೊಳ್ಳಲು ಆರೋಗ್ಯ ಸಲಹೆ ನೀಡಿದೆ.
ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಲಾರ್ವಾ ನಾಶ, ಸ್ವಚ್ಚತಾ ಅಭಿಯಾನ, ಜಾಗೃತಿ ಜಾಥಾ ಮತ್ತು ಕರಪತ್ರಗಳ ವಿತರಣೆ ಕಾರ್ಯಕ್ರಮಗಳನ್ನು ಪ್ರತಿ ಶುಕ್ರವಾರ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬರು ಸಾಧ್ಯವಾದಷ್ಟು ಕೈ, ಕಾಲು ಮುಚ್ಚುವಂತೆ ಬಟ್ಟೆ ಧರಿಸಬೇಕು. ಇದರಿಂದ ಸುಲಭವಾಗಿ ಸೊಳ್ಳೆ ಕಚ್ಚುವದನ್ನು ತಪ್ಪಿಸಬಹುದು. ಖಾಸಗಿ ಹಾಗೂ ಸಾರ್ವಜನಿಕ ಭಾವಿ, ಕೆರೆ, ನೀರು ಸಂಗ್ರಹಣಾ ತೊಟ್ಟಿಗಳಿಗೆ ಆರೋಗ್ಯ ಇಲಾಖೆಯಿಂದ ಗಪ್ಪಿ ಮೀನು ಬಿಡಲಾಗುತ್ತಿದೆ. ಮನೆಮನೆ ಆರೋಗ್ಯ ಸಮೀಕ್ಷೆಯೂ ಪ್ರಗತಿಯಲ್ಲಿದೆ. ಇದರಿಂದಾಗಿ ಡೆಂಗ್ಯೂ ನಿಯಂತ್ರಣದಲ್ಲಿದೆ ಎಂದರು.