ಪ್ರವಾಹ ಕಾರ್ಯಾಚರಣೆಗೆ ನೀಲನಕ್ಷೆ
ಧಾರವಾಡ,ಜು20: ಜಿಲ್ಲೆಯ ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳನ್ನು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ವಾಡಿಕೆಯ ಮಳೆ ಆಗಿದೆ. ಬರುವ ಆಗಸ್ಟ್ ಮತ್ತು ಸೆಪ್ಟೆಂಬರ ತಿಂಗಳುಗಳಲ್ಲಿ ವ್ಯಾಪಕವಾಗಿ ವಾಡಿಕೆಗಿಂತ ಹೆಚ್ವು ಮಳೆ ಆಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಯಾವುದೇ ಜನ, ಜಾನುವಾರು ಹಾನಿ ಆಗದಂತೆ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತವು ಅಗತ್ಯ ರಕ್ಷಣಾ ಸಾಮಗ್ರಿ, ತಂಡಗಳನ್ನು ಹೊಂದಿ, ಸಮರ್ಪಕ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪ್ರವಾಹದ ಮುನ್ನೆಚ್ಚರಿಕೆಯ ಕುರಿತು ಕೆಲಗೇರಿ ಕೆರೆಯಲ್ಲಿ ಆಯೋಜಿಸಿದ್ದ ಅಣುಕು ಪ್ರದರ್ಶನವನ್ನು ಶಾಲಾ ಮಕ್ಕಳು, ಸಾರ್ವಜನಿಕರೊಂದಿಗೆ ವೀಕ್ಷಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಅಣುಕು ಪ್ರದರ್ಶನದ ಉದ್ದೇಶ: ಜಿಲ್ಲೆಯಲ್ಲಿ ಕುಂದಗೋಳ, ಹುಬ್ಬಳ್ಳಿ, ಅಣ್ಣಿಗೇರಿ, ನವಲಗುಂದ ಧಾರವಾಡ ತಾಲೂಕಿನಲ್ಲಿ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳು ದೊಡ್ಡ ಪ್ರಮಾಣದ ಹಳ್ಳಗಳಾಗಿದ್ದು, ಸದರಿ ಹಳ್ಳಗಳು ಮಳೆಗಾಲದಲ್ಲಿ ಅಚ್ಚು-ಕಟ್ಟು ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಜಿಲ್ಲೆಯ ಸುಮಾರು 56 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರವಾಹ ಪೀಡಿತ ಗ್ರಾಮಗಳಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಸುಸ್ಥಿತಿಯಲ್ಲಿ ಇರುವ ಕುರಿತು ಪರಿಶೀಲಿಸಿ, ಸಿದ್ಧತೆಯಲ್ಲಿಟ್ಟುಕೊಳ್ಳುವದಕ್ಕಾಗಿ ಹಾಗೂ ಪ್ರವಾಹದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಅಣುಕು ಪ್ರದರ್ಶನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪ್ರವಾಹ ಪೀಡಿತಕ್ಕೆ ಒಳಗಾಗಬಹುದಾದ ಪ್ರದೇಶಗಳು: ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳಗಳಿಂದ 5 ತಾಲೂಕುಗಳಲ್ಲಿನ 35 ಗ್ರಾಮ ಪಂಚಾಯಿತಿ ವ್ಯಾಪ್ತಿಯ 56 ಗ್ರಾಮಗಳು ಪ್ರವಾಹ ಪೀಡಿತವಾಗಬಹುದು ಮತ್ತು ಈ 56 ಗ್ರಾಮಗಳ 8,677 ಜನರು ಇರುವ 1,824 ಕುಟುಂಬಗಳು, 3,188 ಜಾನುವಾರುಗಳು ಹಾಗೂ 85,514 ಎಕರೆ ಕೃಷಿ ಜಮೀನು ಪ್ರವಾಹಕ್ಕೆ ಒಳಗಾಗಬಹುದೆಂದು ಸಮೀಕ್ಷೆ ಮೂಲಕ ಅಂದಾಜಿಸಲಾಗಿದೆ. ಆದುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯಕ್ಕೆ ತಕ್ಕಂತೆ 71 ಕಾಳಜಿ ಕೇಂದ್ರಗಳು ಹಾಗೂ ಆರು ಗೋಶಾಲೆಗಳನ್ನು ತೆರೆಯಲು ಸ್ಥಳ ಗುರುತಿಸಿ, ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಣುಕು ಪ್ರದರ್ಶನ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಪ್ರಕಾಶ ಪವಾರ, ಧಾರವಾಡ ತಹಶೀಲ್ದಾರ ಡಾ. ಡಿ.ಎಚ್.ಹೂಗಾರ, ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ರಾಮಕೃಷ್ಣ ಸದಲಗಿ, ಕೆಲಗೇರಿ ಕಲ್ಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರುದ್ರಗೌಡ ಪಾಟೀಲ, ಅಗ್ನಿಶಾಮಕ ಸಿಬ್ಬಂದಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು, ಆರೋಗ್ಯ ಇಲಾಖೆಯ, ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಎನ್‍ಸಿಸಿ ವಿದ್ಯಾರ್ಥಿಗಳು, ಸಿಬ್ಬಂದಿಗಳು, ವಿವಿಧ ಗ್ರಾಮಗಳ ನುರಿತ ಈಜುಗಾರರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು.