ಸರಕಾರಿ ಮಹಿಳಾ ಕಾಲೇಜಿಗೆ ಜಿಲ್ಲಾಧಿಕಾರಿ ಭೇಟಿ
ಧಾರವಾಡ,ಜು20: ಧಾರವಾಡ ನಗರದ ಹೃದಯಭಾಗದಲ್ಲಿರುವ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಭೇಟಿ ನೀಡಿ, ಕಟ್ಟಡ ಪರಿಶೀಲಿಸಿ, ಪ್ರಧ್ಯಾಪಕರು, ಶಿಕ್ಷಕರೊಂದಿಗೆ ಅಗತ್ಯ ಸೌಲಭ್ಯಗಳ ಕುರಿತು ಚರ್ಚಿಸಿದರು.
ಮಳೆಗಾಲದಲ್ಲಿ ಸೋರಿಕೆಯಿಂದಾಗಿ ವಿದ್ಯಾರ್ಥಿನೀಯರಿಗೆ ತರಗತಿಗಳನ್ನು ತೆಗೆದುಕೊಳ್ಳುವುದು ಕಷ್ಟವಾಗಿದೆ. ಮೂಲ ಸೌಕರ್ಯಗಳ ಕೊರತೆ ಇದೆ ಎಂಬ ದೂರಿನ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಬೆಳಿಗ್ಗೆ ದಿಡೀರ ಕಾಲೇಜಿಗೆ ಭೇಟಿ ನೀಡಿದರು.
ಪ್ರತಿ ಕ್ಲಾಸ್ ರೂಮ್, ಕಚೇರಿಗೆ ಹೋಗಿ ಪರಿಶೀಲಿಸಿದರು. ತರಗತಿಯಲ್ಲಿದ್ದ ವಿದ್ಯಾರ್ಥಿನೀಯರಿಗೆ ಅಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ವಿದ್ಯಾರ್ಥಿನೀಯರ ಹಾಜರಾತಿ ಪರಿಶೀಲಿಸಿ, ವಿದ್ಯಾರ್ಥಿಗಳು ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು. ಅವರ ವೈಯಕ್ತಿಕ ಕಾಳಜಿ ಮಾಡಬೇಕೆಂದು ಅವರು ಸೂಚಿಸಿದರು.
ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಟ್ಟಡ ಪರಿಶೀಲಿಸಿದ ನಂತರ ಇದು ಶತಮಾನದಷ್ಟು ಹಳೆಯ ಕಟ್ಟಡವಿರುವುದರಿಂದ ದುರಸ್ತಿಗಿಂತ ಬೇರೆ ಕಟ್ಟಡದಲ್ಲಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ, ಬೋಧನೆ ಕಲಿಕೆಗೆ ಅವಕಾಶ ಮಾಡುವುದು ಉತ್ತಮವೆನಿಸುತ್ತದೆ ಎಂದು ಅವರು ಹೇಳಿದರು.
ಕಾಲೇಜಿನವರು ಮಳೆಗಾಲ ಪೂರ್ವದಲ್ಲಿ ಕಾಲೇಜಿನ ಕಟ್ಟಡ ಸಮಸ್ಯೆ ತಿಳಿಸಿದ್ದರೆ, ಇಷ್ಟೊತ್ತಿಗಾಗಲೇ ಬೇರೆ ಕಟ್ಟಡ ವ್ಯವಸ್ಥೆ ಮಾಡಿ, ನೂತನ ಕಟ್ಟಡ ಕಾಮಗಾರಿ ಆರಂಭಿಸಲು ಕ್ರಮವಹಿಸಲಾಗುತ್ತಿತ್ತು ಎಂದು ಅವರು ತಿಳಿಸಿದರು.
ಅತೀ ಶೀಘ್ರದಲ್ಲಿ ವಿದ್ಯಾರ್ಥಿನೀಯರಿಗೆ ಬೋಧನಾ ಕೊಠಡಿಗಳನ್ನು ಬೇರೆ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ವಿದ್ಯಾರ್ಥಿನೀಯರಿಗೆ, ಭಯ ಬೇಡ. ಸಮಸ್ಯೆಗಳಿದ್ದಲ್ಲಿ ನೇರವಾಗಿ ತಮ್ಮಗೆ ಭೇಟಿ ಆಗಿ ಗಮನಕ್ಕೆ ತರುಬಂತೆ ಕಾಲೇಜು ಪ್ರಿನ್ಸಿಪಾಲಗೆ ಸೂಚನೆ ನೀಡಿದ್ದೇನೆ. ಮುಂದಿನ ಎರಡಮೂರು ದಿನದಲ್ಲಿ ಈ ಸಮಸ್ಯೆ ಪರಿಹರಿಸಲು ಪ್ರಯತ್ನಸುವುದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಡಾ. ಎಸ್.ಎಸ್.ಅಂಗಡಿ ಸೇರಿದಂತೆ ಕಾಲೇಜು ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿನೀಯರು ನಿರ್ಮಿತಿ ಇಂಜಿನೀಯರ ಸುರೇಂದ್ರಕುಮಾರ ಹಾಗೂ ಇತರರು ಉಪಸ್ಥಿತರಿದ್ದರು.