ಭಕ್ತಿಯ ಮಳೆಯಲ್ಲಿ ಮಿಂದೆದ್ದ ಭಕ್ತರು
ಸಂಜೆವಾಣಿ ನ್ಯೂಸ್
ಮೈಸೂರು: ಜು.20:- ದಟ್ಟ ಮಂಜು, ಮೈ ಕೊರೆಯುವ ಚಳಿ, ಜಿಟಿ ಜಿಟಿ ಮಳೆಯ ನಡುವೆ ಸಾವಿರಾರು ಮಂದಿ ಭಕ್ತರು ಚಾಮುಂಡೇಶ್ವರಿಯ ದರ್ಶನ ಪಡೆದು ಭಕ್ತಿಯ ಮಳೆಯಲ್ಲಿ ಮಿಂದೆದ್ದರು.
ಎರಡನೇ ಆಷಾಢ ಶುಕ್ರವಾರ ಚಾಮುಂಡಿಬೆಟ್ಟದಲ್ಲಿ ವರುಣ ಸಿಂಚನದೊಂದಿಗೆ ಭಕ್ತಿಯ ಸಿಂಚನವೂ ಆಯಿತು. ಮಳೆ, ಮಂಜು, ಚಳಿಯನ್ನೂ ಲೆಕ್ಕಿಸದೆ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಚಾಮುಂಡೇಶ್ವರಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು. ಮುಂಜಾನೆಯಿಂದಲೇ ರಾಜ್ಯದ ಮೂಲೆ ಮೂಲೆಯಿಂದ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ಜಯಘೋಷ ಕೂಗುತ್ತ ಚಾಮುಂಡೇಶ್ವರಿ ದರ್ಶನ ಪಡೆದರು.
ಎಂದಿನಂತೆ ಸಾರ್ವಜನಿಕರ ವಾಹನಕ್ಕೆ ನಿರ್ಬಂಧ ವಿಧಿಸಿದ್ದರಿಂದ ಲಲಿತ ಮಹಲ್ ಬಳಿಯಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಮಳೆಯಲ್ಲೂ ಮೆಟ್ಟಿಲುಗಳಿಗೆ ಹರಿಶಿಣ ಕುಂಕುಮ ಹಚ್ಚುತ್ತಾ ಬೆಟ್ಟಕ್ಕೆ ಬಂದು ಭಕ್ತಿಭಾವ ಮೆರೆದರು. 50, 100 ಹಾಗೂ 300 ರೂ ವಿಶೇಷ ದರ್ಶನದ ಸರತಿ ಸಾಲಿನಲ್ಲೂ ಹೆಚ್ಚು ಜನ ಕಂಡುಬಂದರು. ಮಳೆಯ ಕಾರಣಕ್ಕೆ ಬೆಳಗ್ಗೆ ಭಕ್ತರ ಸಂಖ್ಯೆ ಕಡಿಮೆಯಿತ್ತು. ಮಳೆ ಬಿಡುವು ನೀಡಿದ ಬಳಿಕ ಭಕ್ತರ ಸಖ್ಯೆ ಹೆಚ್ಚಾಯಿತು.
ಮುಂಜಾನೆಯಿಂದಲೇ ಪೂಜೆ: ಎರಡನೇ ಆಶಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮುಂಜಾನೆ 3 ಗಂಟೆಯಿಂದಲೇ ಬೆಟ್ಟದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಪ್ರತಿ ವಾರದಂತೆ ಮೊದಲಿಗೆ ದೇವಿಗೆ ಅಭಿಷೇಕ, ರುದ್ರಾಭೀಷೇಕ, ಪಂಚಾಮೃತ ಅಭಿಷೇಕ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ ಬೆಳಗ್ಗೆ 11 ಗಂಟೆಗೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ನಾಗಲಕ್ಷ್ಮೀ ಅಲಂಕಾರ: ಆಷಾಢ ಮಾಸದ ಪ್ರತಿ ಶುಕ್ರವಾರಗಳಲ್ಲೂ ಚಾಮುಂಡೇಶ್ವರಿಗೆ ವಿವಿಧ ರೀತಿಯ ಅಲಂಕಾರಗಳನ್ನು ಮಾಡಲಿದ್ದು, ಈ ವಾರ ದೇವಿಗೆ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ಬದನೆಕಾಯಿ, ಕುಂಬಳಕಾಯಿ, ಮಂಗಳೂರು ಸೌತೆ, ಕಿತ್ತಳೆ, ದಾಳಿಂಬೆ, ಮೋಸಂಬಿ, ಡ್ರ್ಯಾಗನ್ ಫ್ರೂಟ್, ತೆಂಗಿನಕಾಯಿ ಸೇರಿದಂತೆ ವಿವಿಧ ಫಲಪುಷ್ಪ, ತರಕಾರಿಗಳಿಂದ ದೇವಸ್ಥಾನದ ಆವರಣವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ವಿವಿಧ ಹೂವುಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿಯನ್ನು ಕಂಡು ಭಕ್ತರು ಪುನೀತರಾದರು.
ಗಣ್ಯರಿಂದ ದರ್ಶನ: 2ನೇ ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಅಸಂಖ್ಯಾತ ಭಕ್ತರೊಂದಿಗೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್, ಪುತ್ರಿ ಐಶ್ವರ್ಯ, ಪುತ್ರ ಆಕಾಶ್ ಕೆಂಪೇಗೌಡ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ನಟಿಯರಾದ ಸುಧಾರಾಣಿ, ಮಾಳವಿಕ ಅವಿನಾಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸೇರಿದಂತೆ ಹಲವು ಗಣ್ಯರು ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಭಕ್ತರಿಗೆ ಪ್ರಸಾದದ ವ್ಯವಸ್ಥೆ: ಆಷಾಢ ಶುಕ್ರವಾರದ ಅಂಗವಾಗಿ ಬೆಟ್ಟಕ್ಕೆ ಭೇಟಿ ನೀಡಿದ ಭಕ್ತರಿಗೆ ಕಳೆದ ವಾರದಂತೆ ಅಚ್ಚುಕಟ್ಟಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕಳೆದ 13 ವರ್ಷಗಳಿಂದ ಪ್ರತಿ ವರ್ಷ 2ನೇ ಆಷಾಢ ಶುಕ್ರವಾರದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿಸುವ ನಂಜನಗೂಡಿನ ಚಾಮುಂಡಿ ಟೌನ್‍ಷಿಪ್ ಹಾಗೂ ಕೊಯಮತ್ತೂರಿನ ದುರ್ಗಾ ಏಜೆನ್ಸಿಯ ಶಾಂತಿ ಮತ್ತು ತಿರುಮಲೈಸ್ವಾಮಿ ತಂಬು ದಂಪತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಬೆಳಕ್ಕೆ ಉಪಾಹಾರಕ್ಕೆ ಉಪ್ಪಿಟ್ಟು, ಕೇಸರಿಬಾತ್, ಪೊಂಗಲ್, ಬೋಂಡಾ, ಮಧ್ಯಾಹ್ನ ಊಟಕ್ಕೆ ಅನ್ನ, ಸಾಂಬಾರ್, ಮೊಸರನ್ನ, ಜಹಂಗೀರ್, ಪಕೋಡ ವಿತರಿಸಲಾಯಿತು. ಬೆಳಗ್ಗೆ 6.30ರಿಂದ ಆರಂಭವಾದ ಪ್ರಸಾದ ವಿತರಣೆ ರಾತ್ರಿ 7.30ರವರೆಗೂ ನಡೆಯಿತು.