ಲಯನ್ಸ್ ಕಣ್ಣಿನ ಆಸ್ಪತ್ರೆಗೆ 50 ಸಾವಿರ ಡಾಲರ್
ಸಂಜೆವಾಣಿ ನ್ಯೂಸ್
ಮೈಸೂರು: ಜು.20:- ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಫೌಂಡೇಷನ್ ವತಿಯಿಂದ ಮೈಸೂರಿನ ಲಯನ್ಸ್ ಕಣ್ಣಿನ ಆಸ್ಪತ್ರೆಗೆ 50 ಸಾವಿರ ಡಾಲರ್ ಅನುದಾನ ನೀಡಲಾಗುತ್ತಿದೆ ಎಂದು ಅಧ್ಯಕ್ಷೆ ಡಾ.ಪ್ಯಾಟಿ ಹಿಲ್ ತಿಳಿಸಿದರು.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಸೇವೆಗೆಂದೇ ಆರಂಭವಾದ ಕ್ಲಬ್ ನಮ್ಮದು. ನಮ್ಮ ಲಯನ್ಸ್ ಸಂಸ್ಥೆ ವಿಶ್ವದ 200ಕ್ಕೂ ಹೆಚ್ಚಿನ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಲಯನ್ಸ್‍ನಲ್ಲಿರುವ ಸ್ವಯಂ ಸೇವಕರು ವಿವಿಧ ಹುದ್ದೆಗಳಲ್ಲಿದ್ದು, ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಾಲೆ ನಿರ್ಮಾಣ, ರಕ್ತನಿಧಿ, ಆಸ್ಪತ್ರೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ನಮ್ಮ ಸಂಸ್ಥೆ ತೊಡಗಿಸಿಕೊಂಡಿದ್ದು, ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ದಿಗೂ ಕೊಡುಗೆ ನೀಡುತ್ತಿದೆ. ಈ ಬಾರಿ ಪರಿಸರ ಸಂರಕ್ಷಣೆಗೆ 1.3 ಬಿಲಿಯನ್ ಡಾಲರ್ ಅನುದಾನ ನೀಡಲಾಗಿದೆ. ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೂ ನಿಲ್ಲುತ್ತಿದ್ದೇವೆ ಎಂದರು.
ಲಯನ್ಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಮಾತ್ರವಲ್ಲದೆ ಅವರನ್ನು ಉತ್ತಮ ನಾಗರಿಕರನ್ನಾಗಿಸಲೂ ಶ್ರಮಿಸುತ್ತಿದೆ. ಲಯನ್ ಕ್ವೆಸ್ಟ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅವರಲ್ಲಿ ನಾಯಕತ್ವ ಗುಣ, ಕೌಶಲಗಳನ್ನೂ ಬೆಳೆಸುವ ಕೆಲಸ ಮಾಡುತ್ತಿದೆ. ಜತೆಗೆ ವಯಸ್ಕರಲ್ಲಿ ಆರೋಗ್ಯದ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಸದಸ್ಯರಲ್ಲಿ ಅನೇಕರು ವೈದ್ಯರಾಗಿದ್ದು, ಅವರ ಮೂಲಕ ಆರೋಗ್ಯ ನೆರವು ನೀಡಲಾಗುತ್ತಿದೆ ಎಂದರು.
ಪ್ರತಿವರ್ಷ ವಿಶ್ವದ ಎಲ್ಲಾ ದೇಶಗಳಿಂದ ಸುಮಾರು 60-70 ಮಿಲಿಯನ್ ಡಾಲರ್ ಹಣ ಸಂಗ್ರಹವಾಗುತ್ತಿದ್ದು, ಅದನ್ನೆಲ್ಲಾ ಸಮಾಜ ಸೇವೆಗೆ ಬಳಸಲಾಗುತ್ತಿದೆ. ದಾನಿಗಳು ನೀಡುವ ಪ್ರತಿಯೊಂದು ರೂಪಾಯಿಯನ್ನೂ ಸಮಾಜಸೇವೆಗೆಂದೇ ಬಳಸುತ್ತೇವೆ ಎಂದರು.
ಚಾಲನೆಯಲ್ಲಿರುವ ಯೋಜನೆಗಳ ಕುರಿತು ಮಾಹಿತಿ ಪಡೆಯಲು ಇಂದು ಮೈಸೂರಿಗೆ ಆಗಮಿಸಿದ್ದು, ಹಲವು ನೂತನ ಯೋಜನೆಗಳ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
ಸ್ಥಳೀಯ ಲಯನ್ಸ್ ಕ್ಲಬ್‍ಗಳು ದಾನಿಗಳ ನೆರವಿನಿಂದ ದೊಡ್ಡ ದೊಡ್ಡ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ವಿಶ್ವದಾದ್ಯಂತ ವಾರ್ಷಿಕ 10 ಸಾವಿರ ಕೋಟಿಯಷ್ಟು ಅನುದಾನವನ್ನು ಸ್ಥಳೀಯ ಕ್ಲಬ್‍ಗಳಿಗೆ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
1958ರಲ್ಲಿ ಮೈಸೂರಿನಲ್ಲಿ ಮೊದಲ ಲಯನ್ಸ್ ಕ್ಲಬ್ ಸ್ಥಾಪಿಸಲಾಯಿತು. ಅಲ್ಲಿಂದಲೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಮೈಸೂರು ಲಯನ್ಸ್ ಜಿಲ್ಲಾ ವ್ಯಾಪ್ತಿಯ ಕೊಳ್ಳೇಗಾಲದಲ್ಲಿರುವ ಸಂಸ್ಥೆಯ ಕಣ್ಣಿನ ಆಸ್ಪತ್ರೆ ಅಭಿವೃದ್ಧಿಗೆ 41 ಲಕ್ಷ (50 ಸಾವಿರ ಡಾಲರ್) ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಗವರ್ನರ್ ಸುಬ್ರಹ್ಮಣ್ಯ ಮಾತನಾಡಿ, ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಸಂಸ್ಥೆಯ 98 ಕ್ಲಬ್‍ಗಳಿದ್ದು, 3 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಯಾವುದೇ ಪ್ರಾಕೃತಿಕ ವಿಕೋಪ, ಅನಾಹುತಗಳು ಸಂಭವಿಸಿದಾಗ ಸೇವಾ ಕಾರ್ಯಗಳಲ್ಲಿ ಸಂಸ್ಥೆಯು ತೊಡಗಿಸಿಕೊಂಡಿದೆ. ಮಾನವೀಯ ನೆಲೆಗಟ್ಟಿನಲ್ಲಿ ಸದಸ್ಯರು ಕೆಲಸ ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಫೌಂಡೇಷನ್ ಸ್ಥಳಿಯ ಮುಖ್ಯಸ್ಥ ಕೆ.ವಂಶೀಧರ್ ಬಾಬು, ಜಿಲ್ಲಾ ರಾಜ್ಯಪಾಲ ಎನ್.ಸುಬ್ರಮಣ್ಯ, ಉಪ ರಾಜ್ಯಪಾಲ ಕೆ.ಎಲ್.ರಾಜಶೇಖರ್, ಎಸ್.ಮಾಥಿ ದೇವಕುಮಾರ್ ಉಪಸ್ಥಿತರಿದ್ದರು.