ಶಿಥಿಲಗೊಂಡಿದ್ದ ಮನೆಯ ಗೋಡೆ ಕುಸಿತ: ಮಹಿಳೆ ಮೃತ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಜು.20:- ನಿರಂತರ ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದು ಮಹಿಳೆಯ ಕೈಯಲ್ಲಿ ಇದ್ದ ಮಗು ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ತಾಲೂಕಿನ ಕಗ್ಗುಂಡಿ ಗ್ರಾಮದ ಹೇಮಲತಾ (22) ಮೃತ ದುರ್ಧೈವಿ.ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಯ ಗೋಡೆ ಶಿಥಿಲಗೊಂಡಿತ್ತು ಶುಕ್ರವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಶಿಥಿಲಗೊಂಡಿದ್ದ ಮನೆಯಗೋಡೆ ಕುಸಿಯುತ್ತಿರುವುದನ್ನು ಗಮನಿಸಿದ ಮಹಿಳೆ ಹೇಮಲತಾ ತನ್ನ ಕೈಯಲ್ಲಿದ್ದ ಒಂದುವರೆ ವರ್ಷದ ಮಗುವನ್ನು ಮನೆಯಿಂದ ಹೊರಕ್ಕೆ ಎಸೆದು ತಾನು ಹೊರಬರಲು ಪ್ರಯತ್ನಿಸುವಷ್ಟರಲ್ಲಿ ಗೋಡೆ ಏಕಾಏಕಿ ಮಹಿಳೆ ಮೇಲೆ ಬಿದ್ದಿದ್ದರಿಂದ ಸ್ಥಳದಲ್ಲಿ ಮತಪಟ್ಟಿದ್ದಾರೆ. ಮೃತಳ ಪತಿ ಶಿವರಾಜು ತಾಲೂಕು ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕೆಲಸ ನಿರ್ವಹಿಸುತ್ತಿದ್ದು ಘಟನೆ ನಡೆದ ಸಂದರ್ಭದಲ್ಲಿ ಕರ್ತವ್ಯಕ್ಕೆ ತೆರಳಿದ್ದರು. ವಿಷಯ ತಿಳಿದ ಪೆÇಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.
ತಾಲೂಕಿನಲ್ಲಿ ಶಿಥಿಲಗೊಂಡಿರುವ ಮನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಬದಲಿ ಸೂರು ವ್ಯವಸ್ಥೆ ಕಲ್ಪಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಂಡಲ್ಲಿ ಈ ರೀತಿಯ ಅವಗಡಗಳಿಂದ ಪಾರಾಗಬಹುದಾಗಿದೆ ಎಂದು ಗ್ರಾಮದ ರೈತ ರಾಜು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಳೆಗಾಲದ ಸಮಯದಲ್ಲಿ ಮನೆ ಗೋಡೆ ಕುಸಿತದಿಂದ ವರ್ಷಕ್ಕೆ ಹಲವು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ, ಇದಕ್ಕೆ ಸರ್ಕಾರದಿಂದ ಪರಿಹಾರವೂ ಸಿಗುತ್ತಾ ಇದೆ. ಆದರೆ ಇದರ ಬದಲು ಇಂತಹ ಶಿಥಿಲಗೊಂಡ ಮನೆಗಳನ್ನು ಅಧಿಕಾರಿಗಳು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗುವ ವಸತಿ ಯೋಜನೆಯಡಿಯಲ್ಲಿ ಸೂರು ಕಲ್ಪಿಸಿ ಕೊಟ್ಟರೆ ಜೀವ ಉಳಿಯುತ್ತದೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.