ಸಿಎಂ ತೇಜೋವಧೆ: ಕಾಂಗ್ರೆಸ್‍ನಿಂದ ದೂರು
ಸಂಜೆವಾಣಿ ನ್ಯೂಸ್
ಮೈಸೂರು: ಜು.20:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿದೆ ಎನ್ನಲಾದ ಹಗರಣದ ವಿಚಾರಕ್ಕೆ ಸಂಬಂಧಿಸಿದಂತೆ ಆರ್‍ಟಿಐ ಕಾರ್ಯಕರ್ತರು ಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದು, ಅವರ ವಿರುದ್ಧ ಕಾನೂನಿನ ಕ್ರಮವಹಿಸಬೇಕೆಂದು ಕಾಂಗ್ರೆಸ್ ನಿಯೋಗದ ಸದಸ್ಯರು ನಗರ ಪೆÇಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ರಾಜ್ಯ ಸರ್ಕಾರ ಈಗಾಗಲೇ ನ್ಯಾಯಾಂಗ ತನಿಖೆಗೆವಹಿಸಿದೆ. ಅಲ್ಲದೇ ಸಿಎಂ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಕೆಸರೆ ಗ್ರಾಮದ ಸರ್ವೆ ನಂ.464ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಮುಡಾ ಅಧಿಸೂಚನೆ ಹೊರಡಿಸದೆ ವಶಕ್ಕೆ ಪಡೆದು, ಕಾನೂನುಬಾಹಿರವಾಗಿ ಇವರ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಜನರಿಗೆ ಹಂಚಿರುತ್ತಾರೆ. ಅಲ್ಲದೇ ಮುಡಾದಿಂದ ಆಗಿರುವ ತಪ್ಪನ್ನು ಒಪ್ಪಿಕೊಂಡು ಕಾನೂನಿನ ಅಡಿಯಲ್ಲಿ 50:50 ಅನುಪಾತದಂತೆ ಪರಿಹಾರ ರೂಪದಲ್ಲಿ ಪಾರ್ವತಿ ಅವರಿಗೆ ಪರ್ಯಾಯವಾಗಿ ನಿವೇಶನವನ್ನು ನೀಡಲಾಗಿದೆ.
ಆದರೆ ಆರ್‍ಟಿಐ ಕಾರ್ಯಕರ್ತರಾದ ಗಂಗರಾಜು ಮತ್ತು ಸ್ನೇಹಮಹಿ ಕೃಷ್ಣ ಈ ವಿಚಾರದಲ್ಲಿ ಸಿಎಂ ವಿರುದ್ಧವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪಾರ್ವತಿ ಅವರಿಗೆ ನಿವೇಶನ ನೀಡಿರುವುದು ಕಾನೂನುಬಾಹಿರ ಎಂದು ಆರೋಪಿಸಿ ಮಾಧ್ಯಮಗಳ ಎದುರು ಸುಳ್ಳು ದಾಖಲೆಗಳನ್ನು ಪ್ರದರ್ಶಿಸಿ, ಸುಳ್ಳು ಮಾಹಿತಿ ನೀಡಿ, 20 ದಿನಗಳಿಂದಲೂ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಈ ಕುರಿತಂತೆ ಆರ್‍ಟಿಐ ಕಾರ್ಯಕರ್ತರಾದ ಗಂಗರಾಜು ಹಾಗೂ ಸ್ನೇಹಮಯಿ ಕೃಷ್ಣ ಅವರಿಗೆ ದಾಖಲೆಗಳಿದ್ದರೆ, ಅವುಗಳನ್ನು ನ್ಯಾಯಾಂಗ ತನಿಖೆಗೆ ನೇಮಕಗೊಂಡಿರುವ ನಿವೃತ್ತ ನ್ಯಾಯಾಧೀಶ ದೇಸಾಯಿ ಅವರಿಗೆ ನೀಡಬೇಕು. ಇದನ್ನು ಹೊರತುಪಡಿಸಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರೊಂದಿಗೆ ಶಾಮೀಲಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರ ಬಗ್ಗೆ ಆರೋಪ ಮಾಡುತ್ತಾ, ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಹೀಗಾಗಿ ಈ ಇಬ್ಬರು ಆರ್‍ಟಿಐ ಕಾರ್ಯಕರ್ತರುಗಳ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಮಾಧ್ಯಮ ವಕ್ತಾರ ಕೆ. ಮಹೇಶ್, ಡಾ. ಮನೋನ್ಮಣಿ ಇತರರಿದ್ದರು.