ನಗರ ಸಭೆ ವೈಪಲ್ಯ: ಸಾಪಲ್ಯ ಕಾಣದ ನಗರೋತ್ಥಾನ ಕಾಮಗಾರಿ
ಸಂಜೆವಾಣಿ ವಾರ್ತೆ
ಹನೂರು ಜು 20 :- ಚಾಮರಾಜನಗರ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಜಿಲ್ಲೆಯಾಗಿ ರಚನೆಯಾದ ಚಾಮರಾಜನಗರ ಅಭಿವೃದ್ಧಿಯಲ್ಲಿ ಮಾತ್ರ ಮಾಮೂಲಿ ತಾಲ್ಲೂಕುಗಳಿಗಿಂತಲೂ ಕಡೆಯಾಗಿ ಆಮೆಗತಿಯಲ್ಲಿ ಸಾಗುತ್ತಿದೆ .
ಪ್ರಸ್ತುತ ನಗರಸಭೆ ಅಧ್ಯಕ್ಷರಿಲ್ಲದೆ ಆಡಳಿತಾಧಿಕಾರಿ ಹಾಗೂ ಮೂಲತಹ ತೋಟಗಾರಿಕೆ ಇಲಾಖೆಯಿಂದ ಬಂದಿರುವ ಪೌರಾಯುಕ್ತ ರಾಮಾದಾಸರ ದುರಾಡಳಿತಕ್ಕೆ ಸಿಲುಕಿದ್ದು ಚಾಮರಾಜನಗರ ಪಟ್ಟಣದ ಎಲ್ಲಾ ವಾರ್ಡ್ ಗಳ 40 ಕೋಟಿ ನಗರೋತ್ಥಾನ ಅನುದಾನದ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.
ನಗರಸಭಾ ಕಛೇರಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಡನೆ ಪೌರಾಯುಕ್ತರಿಗಿರುವ ನಂಟು ತಾಂತ್ರಿಕ ಶಾಖೆಯ ಎಇ, ಜೆಇ ಯಾರೊಡನೆಯು ಇಲ್ಲ..,ಇದ್ದರೆ ಹಿಂದಿನ ಎಇ ಸತ್ಯಮೂರ್ತಿರವರ ಲಂಚದ ಸುಳಿಯಲ್ಲಿ ಮುಖ್ಯ ಜೊತೆಗಾರನಾಗಿ ಸಿಕ್ಕಿಬಿದ್ದಿದ್ದ ತಾಂತ್ರಿಕ ಶಾಖೆ ಸಹಾಯಕ ರಾಮಸಮುದ್ರದ ನಾಗು ಅಲಿಯಾಸ್ ನಾಗರಾಜು ಮಾತ್ರ ಪೌರಾಯುಕ್ತರ ಅಚ್ಚು ಮೆಚ್ಚು.ಏಕೆಂದರೆ ನಾಗು ತಾಂತ್ರಿಕ ಶಾಖೆಯ ಸಕಲಕಲಾವಲ್ಲಭ ಪ್ರತಿ ಗುತ್ತಿಗೆ ಕಾಮಗಾರಿ, ಅಗತ್ಯ ವಸ್ತುಗಳ (ಬ್ಲೀಚಿಂಗ್ ಪೌಡರ್, ಆಲಂ ) ಖರೀದಿ ಬಿಲ್, ಬಿಲ್ಡಿಂಗ್ ಲೈಸೆನ್ಸ್ ಹಣ ಇನ್ನಿತರ ಬಿಲ್ ಗಳ ಪರ್ಸೆಂಟೇಜ್ ಹಣವನ್ನು ತಲುಪಿಸುವುದೆ ಈತನ ಮುಖ್ಯ ಕೆಲಸ.
ಈತ ಲೋಕಾಯುಕ್ತ ದಾಳಿಯಲ್ಲಿ ಎಇ ಸತ್ಯಮೂರ್ತಿರವರ ಜೊತೆಗೆ ಸಿಕ್ಕಿ ಬಿದ್ದಿದ್ದ ಎರಡನೇ ಆರೋಪಿ ಜೊತೆಗೆ ಕಳೆದೆರಡು ವರ್ಷಗಳ ಹಿಂದೆಯೇ ಕಛೇರಿಯಿಂದ ಅಮಾನತು ಆಗಿದ್ದರೂ ಸಹ ಈತನ ಅವಶ್ಯಕತೆ ಪೌರಾಯುಕ್ತ ರಾಮದಾಸ್ ರಿಗೆ ಅತ್ಯಮೂಲ್ಯ. ಲಂಚದ ಆರೋಪದಡಿ ನಗರಸಭೆಯಿಂದ ಹೊರ ಬಂದಿದ್ದ ಈತನ ಪ್ರಭಾವ ಎಷ್ಟಿದೆ ಎಂದರೆ ಪತ್ನಿಯ ಹೆಸರಲ್ಲಿ ಹೊರಗುತ್ತಿಗೆ ಅಡಿ ಕೆಲಸ ನಿರ್ವಹಿಸುತ್ತಿರುವ ಈತನನ್ನು ಯಾರೂ ಪ್ರಶ್ನಿಸದೇ ಇರುವುದು ಪೌರಾಯುಕ್ತರ ಸ್ವಜಾತಿ ಪ್ರೇಮ ಹಾಗೂ ಈತನ ಲಂಚದ ಕಲೆಕ್ಷನ್ ಕಮಾಲ್ ಎಂದರೂ ಅತಿಶಯೋಕ್ತಿಯಾಗಲಾರದು. ಪೌರಾಯುಕ್ತರಿಗೆ ಶಾಶ್ವತ ಸರ್ಕಾರಿ ಸಹಾಯಕ ಅಭಿಯಂತರ ಜೊತೆಗೆ ಇಲ್ಲದ ಬೆಸುಗೆ ಈ ನಾಗು ಅಲಿಯಾಸ್ ನಾಗರಾಜನಿಗಿದೆ. ಅದರಿಂದಲೇ ತಾಂತ್ರಿಕ ಶಾಖೆಗೂ ಪೌರಾಯುಕ್ತರಿಗೆ ಇರುವ ಬಾಂಧವ್ಯ ಕೇವಲ ಬಿಲ್ ಸಹಿಗಳಿಗೆ ಮಾತ್ರ.
ನಗರಸಭೆಯ ಎಇ ಪಟ್ಟಣದ ಸ್ಥಳೀಯ ವ್ಯಕ್ತಿಯಾಗಿದ್ದು ಸ್ವತಃ ನಗರದ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವಿದ್ದು ಪಟ್ಟಣದ ಜೋಡಿರಸ್ತೆಯ ಹಲವು ವರ್ಷಗಳ ಸಮಸ್ಯೆಯನ್ನು ಪರಿಹರಿಸಿದ್ದಾರೆ.ಆದರೆ ಅವರ ಅನುಭವಕ್ಕೆ ಹಾಗು ಹುದ್ದೆಗೆ ಮಣೆ ಹಾಕದ ಪೌರಾಯುಕ್ತರು ಈ ಎರಡು ವರ್ಷಗಳಲ್ಲಿ ನಗರಸಭಾ ನಿಧಿಯ ಅದೆಷ್ಟೋ ಕೆಲಸಗಳಿಗೆ ಸದ್ದಿಲ್ಲದೆ ಸಹಿ ಮಾಡಿ ಟೆಂಡರ್ ಕುದುರಿಸಿ ಲಕ್ಷ ಲಕ್ಷ ಗಳ ಬಿಲ್ ಮಾಡಿ ಬಿಲ್ ಕಮೀಷನ್ ಕಮೀಷನರ್ ಆಗಿದ್ದಾರೆ.
ಕಳೆದ ಅವಧಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿದು ಎರಡೂವರೆ ವರ್ಷಗಳ ಪೂರ್ಣ ಪ್ರಮಾಣದ ಅಧಿಕಾರ ನಿರ್ವಹಿಸಿದ ಬಿ ಜೆ ಪಿ ಪಕ್ಷದ 15 ನಗರಸಭಾ ಸದಸ್ಯರು ವಿಶೇಷ ಸಭೆಯನ್ನು ತೊರೆಯಲು ಮುಖ್ಯ ಕಾರಣಕರ್ತ ಈ ರಾಮದಾಸ್. ಕಳೆದ ಅಧ್ಯಕ್ಷೆ ಆಶಾರ ಆಧಿಕಾರವಧಿಯಲ್ಲಿ ಬಿಜೆಪಿ ಸರ್ಕಾರದ ಉಪಸ್ಥಿತಿಯಲ್ಲಿ ನಡೆದ ನಗರೋತ್ಥಾನ ಕಾಮಗಾರಿ 4 ನೇ ಹಂತದ ಕಾಮಗಾರಿಗಳು ಮಂಜೂರಾಗಿ ಕಾಂಗ್ರೆಸ್ ಸರಕಾರ ರಚನೆಯಾದ ಒಂದು ವರ್ಷದ ನಂತರವೂ ಸಹ ಇಡೀ ಚಾಮರಾಜನಗರದ ನಗರಸಭಾ ವ್ಯಾಪ್ತಿಯಲ್ಲಿ ನಡೆದಿರುವುದು ಕೇವಲ 20% ಮಾತ್ರ. ಹಾಗಾದರೆ ಅನುಮೋದನೆಗೊಂಡು ವಿಧಾನಸಭಾ ಚುನಾವಣೆಗೂ ಮುಂಚೆಯೇ ಆರಂಭವಾದ ನಗರೋತ್ಥಾನ ಕಾಮಗಾರಿ ಒಂದೂವರೆ ವರ್ಷ ಆದರೂ ಸಹ ಮುಗಿಯದಿರಲು ಕಾರಣವೇ ಈ ಕಮೀಷನರ್.
ಪ್ರಭಾವಿ ನಗರಸಭಾ ಸದಸ್ಯರೊಬ್ಬರು ನಗರೋತ್ಥಾನ ಕಾಮಗಾರಿಗಳ ಉಪಗುತ್ತಿಗೆಯನ್ನು ಹೊಂದಿರುವುದಾಗಿ ಆ ಸದಸ್ಯರ ಮಾತಿನ ಆಣತಿಯಂತೆ ನಗರೋತ್ಥಾನ ಕಾಮಗಾರಿಯ ಮುಖ್ಯ ಗುತ್ತಿಗೆದಾರರಿಗೆ ಅಂತಿಮ ನೋಟಿಸ್ ನೀಡದೆ, ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸ್ಸು ಸಹ ಮಾಡದೆ ಆ ನಗರಸಭಾ ಸದಸ್ಯರ ಬೆನ್ನೆಲುಬಾಗಿ ನಿಂತಿರುವುದು ಉಳಿದ ನಗರಸಭೆ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದೆ. ಒಬ್ಬ ಸದಸ್ಯರ ಹಿತಾಸಕ್ತಿಗಾಗಿ ಇಡೀ ಚಾಮರಾಜನಗರ ಪಟ್ಟಣದ ಅಭಿವೃದ್ಧಿ ಹಾಗು ಉಳಿದ 30 ಸದಸ್ಯರ ವಾರ್ಡ್ ನ ಕಾಮಗಾರಿಗಳು ನಡೆಯದಂತೆ ಮಾಡಿರುವ ಪೌರಾಯುಕ್ತರ ಸರ್ವಾಧಿಕಾರಿ ಧೋರಣೆ ಹಾಗೂ ಇದಕ್ಕೆ ಇಂಬು ನೀಡುತ್ತಿರುವ ಚಾಮರಾಜನಗರ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಈ ಇಬ್ಬರ ಧೋರಣೆಯನ್ನು ಖಂಡಿಸಿ, ಪ್ರತಿಭಟಿಸಿ, ನಗರದ ಅಭಿವೃದ್ದಿಗಾಗಿ ನಾವು ಎಂದು ಸಭಾತ್ಯಾಗ ಮಾಡಿದ ಬಿಜೆಪಿ ನಗರಸಭಾ ಸದಸ್ಯರ ಹೋರಾಟ ಇಲ್ಲಿ ಸ್ಮರಣೀಯ.
ಖಾತೆ ಕಮಾಲ್ ಕಮೀಷನರ್ ಬದಲಾವಣೆಯೆ ಇದಕ್ಕೆ ಪರಿಹಾರ.