ಹೆಚ್.ಡಿ.ಕೆ ಸ್ವಾಗತಕ್ಕೆ ಶಾಸಕ ಮಂಜು ನೇತೃತ್ವದಲ್ಲಿ ಸಕಲ ಸಿದ್ದತೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.20: ಸಂಸದ ಹಾಗೂ ಕೇಂದ್ರ ಸರ್ಕಾರದ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಜುಲೈ 21 ರ ಭಾನುವಾರ ಪಟ್ಟಣಕ್ಕೆ ಆಗಮಿಸಿ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶಿಸಿದ ಅನಂತರ ಇದೇ ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸುತ್ತಿರುವ ಹೆಚ್.ಡಿ.ಕೆ ಅವರ ಸ್ವಾಗತಕ್ಕೆ ಶಾಸಕ ಹೆಚ್.ಟಿ.ಮಂಜು ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಕಲ ಸಿದ್ದತೆಗಳನ್ನು ನಡೆಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 11-00 ಗಂಟೆಗೆ ಪಟ್ಟಣಕ್ಕೆ ಆಗಮಿಸಲಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಟಿ.ಬಿ.ಬಡಾವಣೆಯಲ್ಲಿರುವ ಪುರಸಭೆಯ ಪಕ್ಕದ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ಪುರಸಭೆಯ ಜಾಗದಲ್ಲಿ ಬೃಹತ್ ಪೆಂಡಾಲ್ ಹಾಕಲಾಗುತ್ತಿದೆ. ಬಹಿರಂಗ ಸಭೆಯ ಅನಂತರ ಭರ್ಜರಿ ಬಾಡೂಟಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಭಾವುಟಗಳು ಹಾರಡುತ್ತಿದ್ದು ಕುಮಾರಣ್ಣನ ಸ್ವಾಗತದ ಫ್ಲೆಕ್ಸ್ ಗಳು ಎಲ್ಲೆಡೆ ರಾರಾಜಿಸುತ್ತಿವೆ.
ಸುಮಾರು 40 ಸಾವಿರಕ್ಕೂ ಅಧಿಕ ಜನರನ್ನು ಸೇರಿಸುವ ನಿರೀಕ್ಷೆಯಲ್ಲಿ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಜೊತೆಗೂಡಿ ಪ್ರತಿ ಹೋಬಳಿ ಕೇಂದ್ರಗಳಲ್ಲಿಯೂ ಈಗಾಗಲೇ ಸಭೆ ನಡೆಸಿರುವ ಶಾಸಕರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಒಗ್ಗೂಡಿಸಿ ಒಂದೇ ವೇದಿಕೆಯಡಿ ನಿಲ್ಲಿಸುತ್ತಿದ್ದು ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳ ಮೇಲೆ ಕಣ್ಣಿಟ್ಟು ಸಂಘಟನೆಗೆ ಮತ್ತಷ್ಟು ಬಲ ನೀಡುವ ಪ್ರಯತ್ನವನ್ನು ಈ ಕಾರ್ಯಕ್ರಮದ ಮೂಲಕ ಆರಂಭಿಸುತ್ತಿದ್ದಾರೆನ್ನಲಾಗಿದೆ.