ವೀರಶೈವ ಮಹಾಸಭಾದ ಚುನಾವಣೆಯಲ್ಲಿ ಯಾವುದೇ ಬಣ, ಪಕ್ಷ ಇಲ್ಲ: ನಾಗೇಂದ್ರ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 20- ಸಮಾಜದ ಹಿರಿಯ ಮುಖಂಡರು ಹಾಗೂ ಕಾಡಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಎರಡು ಭಾರಿ ಜಿ.ಪಂ. ಸದಸ್ಯರಾಗಿ ಅನುಭವ ಹೊಂದಿರುವ ಹಂಗಳ ನಂಜಪ್ಪ ಅವರನ್ನು ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರನ್ನಾಗಿ ಮಾಡುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ನಾವೆಲ್ಲರು ಚುನಾವಣೆ ಎದುರಿಸುತ್ತಿದ್ದೇವೆ. ಸಮಾಜದ ಬಂಧುಗಳು ನಂಜಪ್ಪ ಹಾಗೂ 20 ಮಂದಿ ನಿರ್ದೇಶಕರ ತಂಡಕ್ಕೆ ಹೆಚ್ಚಿನ ಬೆಂಬಲ ನೀಡಬೇಕೆಂದು ಎಂದು ಎಪಿಎಂ ಮಾಜಿ ಅಧ್ಯಕ್ಷ ಹಾಗೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ಡಿ. ನಾಗೇಂದ್ರ ಮನವಿ ಮಾಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಬಣ ಹಾಗೂ ಪಕ್ಷ ಇಲ್ಲ. ನಾವೆಲ್ಲರು ವೀರಶೈವ ಲಿಂಗಾಯತ ಸಮಾಜದವರು. ಮಹಾಸಭಾದಲ್ಲಿ ಮೂರು ಸಾವಿರಕ್ಕು ಹೆಚ್ಚು ಮತದಾರರಿದ್ದು, ಜು. 21 ರಂದು ಚುನಾವಣೆ ಮತದಾನ ನಡೆಯಲಿದೆ. ಜಿಲ್ಲೆಯ ವೀರಶೈವ ಮತದಾರ ಬಂಧುಗಳು ಈ ಬಾರಿ ಹಂಗಳ ನಂಜಪ್ಪ ಮತ್ತು ಅವರ ತಂಡವನ್ನು ಬೆಂಬಲಿಸುವ ಮೂಲಕ ಹೆಚ್ಚಿನ ಬಹುಮತದಲ್ಲಿ ಗೆಲ್ಲಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಮಹಾಸಭೆಯಿಂದ ಹೆಚ್ಚಿನ ಕೆಲಸ ಕಾರ್ಯಗಳು ಆಗಬೇಕಾಗಿತ್ತು. ಹಿರಿಯರಾದ ಹಂಗಳ ನಂಜಪ್ಪ ಅವರು ಸೂಕ್ತ ಎಂದು ಸಮಾಜದ ಮಠಾಧಿಪತಿಗಳ ನೇತೃತ್ವದಲ್ಲಿ ನಾನು ಸೇರಿದಂತೆ 12 ಮಂದಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಎಲ್ಲರ ಒಮ್ಮತದ ಅಭ್ಯರ್ಥಿಯಾಗಿ ಹಂಗಳ ನಂಜಪ್ಪ ಅವರನ್ನು ಆಯ್ಕೆ ಮಾಡಲಾಗಿತ್ತು. ಅಧ್ಯಕ್ಷರಾಗಿದ್ದ ಮೂಡ್ಲುಪುರ ನಂದೀಶ್ ಅವರು ಮಠಾಧಿಪತಿಗಳ ಆದೇಶವನ್ನು ಧಿಕ್ಕರಿಸಿ, ಸಮಾಜದ ಮುಖಂಡರ ಮಾತಿಗೆ ಮನ್ನಣೆ ನೀಡದೆ, ಮತ್ತೊಂದು ಅವಧಿ ನನಗೆ ಕೊಡಿ ಎಂದು ಸಭೆಯಿಂದ ಹೊರ ನಡೆದು ಬಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ. ಇಂಥವರಿಗೆ ಸಮಾಜದ ಮತದಾರರು ಬೆಂಬಲ ನೀಡಬೇಕಾ ಎಂದು ಡಿ. ನಾಗೇಂದ್ರ ಪ್ರಶ್ನೆ ಮಾಡಿದರು.
ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿದೇಶಿ ಕೇಂದ್ರಸ್ವಾಮಿಗಳ ಮುತುವರ್ಜಿ ಹಾಗೂ ಇಚ್ಚಾಶಕ್ತಿ ಅವರ ಪರಿಶ್ರಮದಿಂದ ಜಿಲ್ಲಾ ಕೇಂದ್ರದಲ್ಲಿ ಬಸವ ಭವನ ಕಾಮಗಾರಿ, ಹಾಗೂ ಬಸವ ಪುತ್ಥಳಿ ನಿರ್ಮಾಣ ವಾಗುತ್ತಿದೆ ಹೊರತು ಮೂಡ್ಲುಪುರ ನಂದೀಶ್ ಕಾರಣರಲ್ಲ. ನಾನು ಸಹ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ನಾವೆಲ್ಲರು ಒಗ್ಗಟ್ಟಿನಿಂದ ಅವರ ಅನತಿಯಂತೆ ಕೆಲಸ ಮಾಡಿದ್ದರಿಂದ ಕಾಮಗಾರಿ ನಡೆಯುತ್ತಿದೆ. ಇಲ್ಲಿ ನಂದೀಶ್ ಪಾತ್ರ ಇಲ್ಲ. ಮೂರು ವರ್ಷಗಳ ಹಿಂದೆ ಅನುದಾನ ಬಿಡುಗಡೆಯಾಗಿತ್ತು. ಶಿವಬಸಪ್ಪ ಅವರ ಅಧ್ಯಕ್ಷರಾಗಿದ್ದ ಈ ಕೆಲಸವಾಗಿತ್ತು. ವಾಟಾಳ್ ನಾಗರಾಜು ಅವರು ನಿವೇಶನ ಕೊಡಿಸುವಲ್ಲಿ ಪ್ರಮುಖರು, ಮಹಾಸಭಾದ ಯಾವುದೇ ನಿರ್ದೇಶಕರು ಹಾಗೂ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಡಿ. ನಾಗೇಂದ್ರ ತಿಳಿಸಿದರು.
ಜಿಲ್ಲಾ ವೀರಶೈವ ಲಿಂಗಾತಯ ಮಹಾಸಭಾದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಚ್.ಎಸ್. ನಂಜಪ್ಪ ಮಾತನಾಡಿ, ಗುಂಡ್ಲುಪೇಟೆ ತಾಲೂಕಿನಲ್ಲಿ ನಾಲ್ಕು ಅವಧಿಯಿಂದ ತಾಲೂಕು ಅಧ್ಯಕ್ಷನಾಗಿ ಸೇವೆ ಮಾಡಿರುವ ಅನುಭವ, ಸಮಾಜದ ಎಲ್ಲ ರಾಜಕಾರಣಿಗಳು, ಹಿರಿಯರು ಹಾಗೂ ಮಠಾಧಿಪತಿಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೆ. ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಬೇಕು. ಬಸವ ಭವನ ಉದ್ಗಾಟನೆ, ಬಸವ ಪುತ್ಥಳಿ ನಿರ್ಮಾಣ, ವೀರಶೈವ ಲಿಂಗಾಯತ ವಿದ್ಯಾರ್ಥಿನಿಲಯ, ಕೌಶಲ್ಯ ಅಭಿವೃದ್ದಿ ಕೇಂದ್ರ ಹಾಗೂ ಉದ್ಯೋಗ ಮಾಹಿತಿ ಕೇಂದ್ರ ಸೇರಿದಂತೆ ಸಮಾಜದ ಬಂಧುಗಳ ಅಭಿವೃದ್ದಿಯನ್ನು ಬಯಸಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇವೆ. ಎಲ್ಲರು ಒಗ್ಗಟ್ಟಿನಿಂದ ಸಮಾಜವನ್ನು ಅಭಿವೃದ್ದಿ ಪಡಿಸಲು ನನಗೊಂದು ಅವಕಾಶ ನೀಡಿ ಎಂದು ನಂಜಪ್ಪ ಮನವಿ ಮಾಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಎನ್‍ರಿಎಚ್ ಮಹದೇವಸ್ವಾಮಿ, ಮುಖಂಡರಾದ ಕೆ. ವೀರಭದ್ರಸ್ವಾಮಿ, ಡಾ. ಪರಮೇಶ್ವರಪ್ಪ, ಸಂತೇಮರಹಳ್ಳಿ ಡಿ.ಪಿ. ಪ್ರಕಾಶ್, ಕಂಠಿ, ಇತರರು ಇದ್ದರು.