ಎಚ್ ಡಿಡಿ ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕ
ಕೋಲಾರ,ಜು.೨೦- ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಒಕ್ಕಲಿಗ ಸಮಾಜದ ಪ್ರಶ್ನಾತೀತಾ ನಾಯಕರಾಗಿದ್ದಾರೆ ಅವರ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್ ಬೆಂಬಲಿತ ಒಕ್ಕಲಿಗ ಸಮಾಜದ ನಾಯಕರಿಗೆ ಇಲ್ಲ. ನಿಮಗೆ ಏನಾದರೂ ಒಕ್ಕಲಿಗ ಸಮುದಾಯ ಬಗ್ಗೆ ಕಾಳಜಿ, ಗೌರವ ಇದ್ದು ಮೈಯಲ್ಲಿ ರಕ್ತ ಹರಿಯುತ್ತಿದ್ದರೆ ಡಿ.ಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕಲಿ. ಅದು ಬಿಟ್ಟು ಸಿದ್ದರಾಮಯ್ಯಗೆ ಬಕೆಟ್ ಹಿಡಿಯುವ ಕೆಲಸಕ್ಕೆ ಒಕ್ಕಲಿಗ ಸಮುದಾಯವನ್ನ ಮಾರಾಟಕ್ಕೆ ಇಟ್ಟು ರಾಜಕಾರಣ ಮಾಡಬೇಡಿ ಎಂದು ಒಕ್ಕಲಿಗ ಸಮುದಾಯದ ಯುವ ಮುಖಂಡರಾದ ಅಮ್ಮೇರಹಳ್ಳಿ ಸತೀಶ್, ಕೀಲುಕೋಟೆ ವಿಜಯ್‌ಗೌಡ (ಬದ್ರಿ), ವೀರಾಪುರ ಈರೇಗೌಡ, ಬೈಪಾಸ್ ಮಂಜು ಸವಾಲು ಹಾಕಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಕಳೆದ ತಿಂಗಳು ನಡೆದ ಕೆಂಪೇಗೌಡರ ಜಯಂತಿಗೆ ದೇವೇಗೌಡರು ಸೇರಿದಂತೆ ಕುಮಾರಸ್ವಾಮಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಅದನ್ನು ಖಂಡಿಸಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶ್ನೆ ಮಾಡಿದ್ದೇವೆ. ನೀವು ಒಕ್ಕಲಿಗರಾಗಿ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ಒಕ್ಕಲಿಗ ಸಮುದಾಯದ ಪರವಾಗಿ ಧ್ವನಿ ಎತ್ತಿದ ನಮ್ಮನ್ನು ಕಿಡಿಗೇಡಿಗಳು ಎಂದು ಕಾಂಗ್ರೆಸ್ ಬೆಂಬಲಿತ ಒಕ್ಕಲಿಗ ಮುಖಂಡರಾದ ಎಂಎಲ್ಸಿ ಅನಿಲ್ ಕುಮಾರ್, ಆರ್. ದಯಾನಂದ್, ಎನ್.ಜಿ ಬ್ಯಾಟಪ್ಪ ಅವರು ಒಕ್ಕಲಿಗ ಸಮುದಾಯದ ಹೆಸರೇಳುವುದಕ್ಕೆ ನೈತಿಕತೆ ನಿಮಗಿಲ್ಲ. ಕಿಡಿಗೇಡಿಗಳು ಎಂಬ ಪದವನ್ನು ಬಳಿಸಿದ್ದೀರಿ ಇದರ ಅರ್ಥ ನಿಮಗೆ ಗೊತ್ತೇ ಎಂದು ಖಂಡಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಮತ್ತು ಹೆಚ್. ಡಿ ಕುಮಾರಸ್ವಾಮಿಯ ಕೊಡುಗೆ ಏನೆಂಬುದು ರಾಜ್ಯ ಮತ್ತು ದೇಶದ ಜನಕ್ಕೆ ಗೊತ್ತಿದೆ ಅಂತಹ ನಾಯಕರ ಬಗ್ಗೆ ಮಾತಾಡುವುದೇ ತಪ್ಪು. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರನ್ನ ಅಧಿಕಾರದಿಂದ ಕೆಳಗಿಳಿಸಿದ್ದು ಇದೇ ಕಾಂಗ್ರೆಸ್, ಜೆಡಿಎಸ್- ಕಾಂಗ್ರೆಸ್ ಮೃತ್ರಿ ಸರ್ಕಾರವನ್ನ ಕೆಡವಿದ್ದು ಇದೇ ಕಾಂಗ್ರೆಸ್ ಆಗ ನಿಮಗೆ ಧ್ವನಿ ಎತ್ತಲಿಲ್ಲ. ಆಗ ಒಕ್ಕಲಿಗ ಸಮುದಾಯ ಕಾಣಲಿಲ್ಲ ಕೇವಲ ಅಧಿಕಾರಕ್ಕಾಗಿ ಬಕೆಟ್ ಹಿಡಿಯುವ ಎಂಎಲ್ಸಿ ಅನಿಲ್ ಕುಮಾರ್, ಆರ್. ದಯಾನಂದ್, ಎನ್.ಜಿ ಬ್ಯಾಟಪ್ಪ ಅವರಿಂದ ಒಕ್ಕಲಿಗ ಸಮುದಾಯಕ್ಕೆ ಕೊಟ್ಟು ಕೊಡುಗೆ ಏನು ಎಂಬುದನ್ನು ಬಹಿರಂಗ ಪಡಿಸಲಿ? ಒಕ್ಕಲಿಗ ಸಂಘದ ಬಗ್ಗೆ ಹೇಳಿಕೆ ಕೊಡುವ ಮೊದಲು ಸಂಘದ ಸದಸ್ಯತ್ವವನ್ನು ಪಡೆದಿದ್ದಾರಾ? ಸಂಘದ ಸದಸ್ಯತ್ವ ಇಲ್ಲದೇ ಇರುವವರು ಸಂಘದ ಬಗ್ಗೆ ಮಾತಾಡುವುದಕ್ಕೆ ನೈತಿಕತೆ ಇಲ್ಲ.
ಕೆಪಿಸಿಸಿ ಮಾಧ್ಯಮ ವಕ್ತಾರಾಗಿರುವ ಆರ್. ದಯಾನಂದ್ ಅವರು ರಾಜಕೀಯವಾಗಿ ಬೆಳೆಯಲು ಯಾರು ಕಾರಣ ಎಂಬುದನ್ನು ನೆನಪು ಮಾಡಿಕೊಳ್ಳಲಿ. ಯಾವ ಪಕ್ಷ ಕಾರಣ ಎಂಬುದನ್ನು ಅರಿಯಲಿ. ಅವರು ಬೆಳೆಯಲು ನಮ್ಮಂತಹ ಯುವಕರನ್ನು ಬಳಸಿಕೊಂಡಿದ್ದಾರೆ. ಅಂತಹವರನ್ನು ಕಿಡಿಗೇಡಿಗಳು ಎಂದು ಹೇಳಲು ನಿಮಗೆ ನೈತಿಕತೆ ಇದ್ದೀಯಾ? ಹುತ್ತೂರು ಹೋಬಳಿಯ ಜಿ.ಪಂ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಒಳ ಪಂಗಡಗಳ ಮಧ್ಯೆ ಗಲಾಟೆ ಮಾಡಿ ರಾಜಕೀಯ ಮಾಡಿದ್ದೇ ಸೋಲಿಗೆ ಕಾರಣ ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಯುವಕರ ಬಗ್ಗೆ ಮಾತಾಡುತ್ತಾರೆ ಎಂದು ಹೇಳಿದರು.
೨೦೧೧ ರಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೆಂಪೇಗೌಡ ಜಯಂತಿ ಮಾಡಿದ್ದು ಜಿಲ್ಲಾ ಅಧ್ಯಕ್ಷ ಕೆ.ವಿ ಶಂಕರಪ್ಪ ಅವರ ತಂಡ ಊರೂರು ಸುತ್ತಿ ಒಕ್ಕಲಿಗ ಸಮಾಜದ ಒಗ್ಗಟ್ಟು ತೋರಿಸಿದಾಗ ನಿಮ್ಮ ಎಲ್ಲಿ ಅವಿತುಕೊಂಡಿದ್ದೀರಿ? ಇದರಲ್ಲಿ ನಿಮ್ಮ ಕೊಡುಗೆ ಏನು?ಕೋಲಾರ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯ ಅಧಿಕಾರಿಗಳು, ರೈತರು, ಸಮಯದಾಯದ ಜನಕ್ಕೆ ಅನ್ಯ ಸಮುದಾಯದಿಂದ ತೊಂದರೆಯಾದಾಗ ನೀವುಗಳು ಯಾಕೆ ಧ್ವನಿ ಎತ್ತುತ್ತಿಲ್ಲ. ಕೇವಲ ಕೆಂಪೇಗೌಡ ಜಯಂತಿಯಲ್ಲಿ ಒಕ್ಕಲಿಗರ ವಿರೋಧಿ ಸಿದ್ದ ರಾಮಯ್ಯ ವಿರುದ್ದ ಘೋಷಣೆ ಕೂಗಿದ ಮಾತ್ರಕ್ಕೆ ನೀವುಗಳು ಮೈ ಪರಚಿಕೊಳ್ಳುವುದಾದರೆ ಮುಂದಿನ ದಿನಗಳಲ್ಲೂ ಇದೇ ಕೆಲಸವನ್ನ ಇಡೀ ಒಕ್ಕಲಿಗ ಸಮುದಾಯ ಮಾಡುತ್ತದೆ.
ಎಂಎಲ್ ಸಿ ಅನಿಲ್ ಕುಮಾರ್, ಎನ್.ಜಿ ಬ್ಯಾಟಪ್ಪ, ಆರ್. ದಯಾನಂದ ಅವರಂತಹವರು ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿ ರಾಜಕೀಯವಾಗಿ ಬೆಳದಿರುವುದಕ್ಕೆ ನಿಮ್ಮಗಳ ಮೇಲೆ ಗೌರವವಿತ್ತು. ಆದರೆ ಇವತ್ತು ಸಿದ್ದರಾಮಯ್ಯನಿಗೋಸ್ಕರ ಒಕ್ಕಲಿಗ ಸಮಯದಾಯದ ಯುವಕರನ್ನ ಕಿಡಿಗೇಡಿಗಳು ಎಂದು ಹೇಳಿಕೆ ನೀಡಿರುವುದನ್ನ ಇಡೀ ಒಕ್ಕಲಿಗರ ಸಮುದಾಯ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಮುಂದೆ ಯಾವುದೇ ಚುನಾವಣೆ ನಡೆದರೂ ನಿಮ್ಮಗಳ ವಿರುದ್ದ ಪ್ರಚಾರ ಮಾಡುತ್ತೇವೆ. ಕಾಂಗ್ರೆಸ್ ಬೆಂಬಲಿತ ಒಕ್ಕಲಿಗ ನಾಯಕರೇ ನಿಮ್ಮ ಬಗ್ಗೆ ಮತನಾಡಿದರೆ ಕಿಡಿಗೇಡಿಗಳು ಎನ್ನುತ್ತೀರಿ. ನಿಮ್ಮ ಯೋಗ್ಯತೆಗೆ ಕೋಲಾರ ಜಿಲ್ಲಾ ಕೇಂದ್ರವಾಗಿದ್ದರೂ ಸಹ ಕೆಂಪೇಗೌಡರ ಪುತ್ಥಳಿ ಇಲ್ಲ. ಇದರ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ. ನಾವು ಇದರ ಬಗ್ಗೆ ಮಾತನಾಡಿದರೆ ಕಿಡಿಗೇಡಿಗಳು ಎನ್ನುತ್ತೀರಿ. ನೀವು ನಿಜವಾದ ಒಕ್ಕಲಿಗರೇ? ಎಂದು ಒಕ್ಕಲಿಗ ಸಮಯದಾಯದ ಅಮ್ಮೇರಹಳ್ಳಿ ಸತೀಶ್, ಕೀಲುಕೋಟೆ ವಿಜಯ್‌ಗೌಡ (ಬದ್ರಿ), ವೀರಾಪುರ ವೀರೇಗೌಡ, ಬೈಪಾಸ್ ಮಂಜು ಪ್ರಶ್ನಿಸಿದ್ದಾರೆ.