೭ನೇ ವೇತನ ಆಯೋಗ ವರದಿ ಜಾರಿಗೆ ಸ್ವಾಗತ
ಕೋಲಾರ,ಜು,೨೦- ರಾಜ್ಯ ೭ನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಯಥಾವತ್ ಜಾರಿ,ವೇತನ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸು ವರದಿಯಲ್ಲಿನ ಫಿಟ್‌ಮೆಂಟ್ ಸೌಲಭ್ಯವನ್ನು ಕನಿಷ್ಠ ಶೇ. ೨೭.೫೦%ಕ್ಕೆ ಹೆಚ್ಚಿಸಿ ಕಾಲ್ಪನಿಕವಾಗಿ ದಿನಾಂಕ:೦೧-೦೭-೨೦೨೨ ರಿಂದ ಅನ್ವಯವಾಗುವಂತೆ ವೇತನ ನಿಗಧಿಪಡಿಸಿದ ಸರ್ಕಾರಕ್ಕೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಜಿಲ್ಲೆಯ ನೌಕರರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಸರ್ಕಾರಿ ನೌಕರರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು,ಉಪಮುಖ್ಯಮಂತ್ರಿಗಳು, ಸಚಿವ ಸಂಪುಟದ ಎಲ್ಲಾ ಸಚಿವರು, ಶಾಸಕರು, ಹಣಕಾಸು ಇಲಾಖೆ ಕಾರ್ಯದರ್ಶಿಗಳು,ಅಧಿಕಾರಿಗಳು, ವೇತನ ಆಯೋಗದ ಅಧ್ಯಕ್ಷರಾ ಸುಧಾಕರರಾವ್ ಮತ್ತವರ ತಂಡಕ್ಕೂ ಹಾಗೂ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಹಾಗೂ ರಾಜ್ಯ ಸಂಘದ ಎಲ್ಲಾ ಪದಾಧಿಕಾರಿಗಳನ್ನು ಅವರು ಅಭಿನಂದಿಸಿದ್ದಾರೆ.
ಅದೇ ರೀತಿ ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್. ವ್ಯಾಪ್ತಿಗೆ ತರುವ ಮೂಲಕ ರಾಜ್ಯದ ನೌಕರರ ಅತಿ ಪ್ರಮುಖವಾದ ಬೇಡಿಕೆ ಈಡೇರಿಸಬೇಕು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಇದನ್ನು ಜಾರಿಗೆ ತರಲು ಮನವಿ ಮಾಡಿದ್ದಾರೆ.
ಅದೇ ರೀತಿ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆ.ಎ.ಎಸ್.ಎಸ್)ಗೆ ಈ ಹಿಂದಿನ ರಾಜ್ಯ ಸರ್ಕಾರವು ೨೦೨೧-೨೨ರ ಆಯವ್ಯದಲ್ಲಿ ಘೋಷಿಸಿತ್ತು. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಪಡೆದು ದಿನಾಂಕ: ೫-೯-೨೦೨೨ ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ.