ಗುರು-ಹಿರಿಯರ ಗೌರವಿಸುವ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ
ತಿಪಟೂರು, ಜು. ೨೦- ತಂದೆ-ತಾಯಿ, ಗುರು ಹಿರಿಯರಿಗೆ ಗೌರವ ನೀಡುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜದ ಸತ್ಪ್ರಜೆಗಳಾಗಿ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ ಎಂದು ನಿವೃತ್ತ ಶಿಕ್ಷಕ ಎಂ.ಆರ್. ಸೋಮಶೇಖರ್ ಹೇಳಿದರು.
ತಾಲ್ಲೂಕಿನ ಬನ್ನಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಅವರಣದಲ್ಲಿ ಜಯಕರ್ನಾಟಕ ಜನಪರ ವೇದಿಕೆ, ರೋಟರಿ ತಿಪಟೂರು ಹಾಗೂ ಕಲ್ಪತರು ಫೌಂಡೇಶನ್ ವತಿಯಿಂದ ಚಿತ್ರನಟ ದಿ. ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ, ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ನೀಡುತ್ತಿರುವ ಎಲ್ಲ ಸಾಮಗ್ರಿಗಳನ್ನು ನೀಡಲಾಗುತ್ತಿದ್ದು, ಹಿಂದಿನ ಕಾಲದಲ್ಲಿ ಗುರುವಿಗೆ ಕಾಣಿಕೆ ನೀಡಿ ವಿದ್ಯೆ ಕಲಿಯಬೇಕಿತ್ತು. ಆದರೆ ಇಂದು ಸಂಘಟನೆ ಮತ್ತು ಸಮಾಜ ಸೇವಕರ ಹೆಸರುಗಳಲ್ಲಿ ಶಾಲೆಗೆ ಬೇಕಾದ ಮತ್ತು ಮಕ್ಕಳಿಗೆ ಬೇಕಾದ ಸಲಕರಣೆ ನೀಡುತ್ತಿರುವುದು ತುಂಬಾ ಸಂತೋಷಕರವಾದ ವಿಷಯ ಎಂದರು.
ರೋಟರಿ ಅಧ್ಯಕ್ಷ ಗವಿಯಣ್ಣ ಮಾತನಾಡಿ, ರೋಟರಿ ನಡೆ ಹಳ್ಳಿಯ ಕಡೆ ಎಂಬ ವಾಕ್ಯದೊಂದಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ, ಶಾಲಾ ಕಾಲೇಜುಗಳ ನಿರ್ವಹಣೆ, ಮೂಲಭೂತ ಸೌಕರ್ಯ, ಮಕ್ಕಳಿಗೆ ಉಪಯೋಗಕ್ಕೆ ಬರುವ ಸಾಮಗ್ರಿಗಳ ಕೊಡುಗೆ, ಪರಿಸರದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಪರಿಸರ ಸಂರಕ್ಷಣೆ ಮಾಡುವ ಉದ್ದೇಶ ಹಾಗೂ ಕೆರೆ ಕಟ್ಟೆ ಸಂರಕ್ಷಣೆಗೆ ಒತ್ತು ನೀಡುವುದು ಇನ್ನು ಹಲವು ಅನೇಕ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಕ್ಕೆ ಒದಗಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಕಲ್ಪಶ್ರೀ ಕಲಾವಿದರ ಸಂಘದ ಕಾರ್ಯದರ್ಶಿ ಕುಮಾರಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಹಿತ್ಯ, ರಂಗಭೂಮಿ, ಯಕ್ಷಗಾನ ಮತ್ತು ಗ್ರಾಮೀಣ ಕ್ರೀಡಾ ಚಟುವಟಿಕೆಗಳನ್ನು ಉಳಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಿ ಪೋಷಕರು ಮತ್ತು ಶಿಕ್ಷಕರು ಈ ನಿಟ್ಟಿನಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಕುರುಕ್ಷೇತ್ರದ ಭೀಮ ಪಾತ್ರಧಾರಿಯ ದೃಶ್ಯಾವಳಿಯ ಡೈಲಾಗ್ ಹೇಳಿ, ನೆರೆದಿದ್ದ ವಿದ್ಯಾರ್ಥಿಗಳಿಗೆ ರಸದೌತಣ ನೀಡಿದರು.
ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲೆ ಶಿಕ್ಷಣ ಕೊಟ್ಟರೆ, ಪೋಷಕರು ಸಂಸ್ಕಾರ ಕೊಟ್ಟು ದೇಶದ ಪ್ರಗತಿಗೆ ಸಹಕಾರಿಯಾಗಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೊಗಡಿನ ಕಸುಬುಗಳ ಬಗ್ಗೆ ಅತಿ ಹೆಚ್ಚು ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಆಯೋಜಕ ಬಿ.ಟಿ.ಕುಮಾರ್, ರೋಟರಿ ಕಾರ್ಯದರ್ಶಿ ಅಶೋಕ್‌ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಯೋಗಾನಂದ್, ಹಾಲ್ಕುರಿಕೆ ಹೆಚ್.ಎಸ್. ಚಂದ್ರಶೇಖರ್, ತಡಸೂರು ಗ್ರಾ.ಪಂ. ಸದಸ್ಯ ಶೇಖರ್, ಸಿ. ಆರ್.ಪಿ ಮಹೇಶ್, ಮಿಥುನ್, ಎಸ್‌ಡಿಎಂಸಿ ಉಪಾಧ್ಯಕ್ಷೆ ರಾಧಾ, ಶಾಲಾ ಮುಖ್ಯ ಶಿಕ್ಷಕಿ ಗೌರಮ್ಮ, ಮುಖಂಡ ತೀರ್ಥಕುಮಾರ್, ಸಂಘಟನೆಯ ನಗರ ಸಂಚಾಲಕ ರೋಹನ್‌ರಾಜ್ ಸೇರಿದಂತೆ ಸಂಘಟನೆ ಪದಾಧಿಕಾರಿಗಳು, ಎಸ್ ಡಿಎಂ ಸಿ ಸದಸ್ಯರು, ಸಹ ಶಿಕ್ಷಕ ವೃಂದ, ಪೋಷಕರು ಭಾಗವಹಿಸಿದ್ದರು.