ಮುಕ್ತಿಗೆ ಭಕ್ತಿ ಮಾರ್ಗವೇ ಶ್ರೇಷ್ಠ
ಮಧುಗಿರಿ, ಜು. ೨೦- ಮುಕ್ತಿಗೆ ಭಕ್ತಿ ಮಾರ್ಗವೇ ಶ್ರೇಷ್ಠ ಎಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತಿಪ್ಪಗೊಂಡನಹಳ್ಳಿಯ ಒಬಳ ರಂಗನಾಥ ಸ್ವಾಮಿ ದೇವಸ್ಥಾನದ ಏಕಾದಶಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜೀವನ ಸಾರ್ಥಕ ಆಗಬೇಕು. ಹುಟ್ಟಿಗೆ ಅರ್ಥ ಬರಬೇಕಾದರೆ ಜೀವನದಲ್ಲಿ ದಾನ, ಧರ್ಮ, ಸತ್ಕಾರ್ಯ ಮಾಡಬೇಕು. ಆಗ ಮಾತ್ರ ನಿಸ್ವಾರ್ಥವಾಗಿ ಬದುಕು ಕಟ್ಟಿಕೊಳ್ಳಬಹುದು ಎಂದರು.
ಜಾತ್ರಾ ಉತ್ಸವಗಳು ಮನುಷ್ಯನ ಬದುಕು ಸಾರ್ಥಕತೆಯಾಗಲು ಸಹಕಾರಿಯಾಗಲಿದೆ. ಧಾರ್ಮಿಕ ಕಾರ್ಯಗಳಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಗ್ರಾಮಾಂತರ ಪ್ರದೇಶಗಳಲ್ಲಿ ಜಾತ್ರಾ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತಸದ ವಿಷಯ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಸಂಸ್ಕೃತಿ, ಧಾರ್ಮಿಕ ಚಿಂತನೆಗಳನ್ನು ಬಿತ್ತರಿಸುವ ಕೆಲಸ ಆಗಬೇಕು. ಮನುಷ್ಯ ಸ್ವಾರ್ಥತತೆ ಬಿಟ್ಟು ಎಲ್ಲರೂ ತಮ್ಮವರೇ ಎಂದು ಅರ್ಥೈಸಿಕೊಂಡು ಬದುಕು ಸಾಗಿಸಬೇಕು ಎಂದರು.
ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಹೊಂದಿದಾಗ ಮನುಷ್ಯನಲ್ಲಿ ಶಾಂತಿ, ನೆಮ್ಮದಿ ದೊರಕುತ್ತದೆ. ಪ್ರತಿ ಗ್ರಾಮದಲ್ಲಿ ದೇವಸ್ಥಾನ ಮತ್ತು ಶಾಲೆಗಳು ಅವಶ್ಯಕ. ಶಾಲೆ ಮತ್ತು ದೇವಸ್ಥಾನಗಳಿಗೆ ಸ್ಥಿತಿವಂತರು ದಾನ, ಧರ್ಮ ಸೇವೆ ಮಾಡುವುದರ ಮೂಲಕ ರಾಜ್ಯಕ್ಕೆ ಮಾದರಿಯಾಗಿ ಬದುಕಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಓಬಳ ರಂಗನಾಥಸ್ವಾಮಿ ದೇವಸ್ಥಾನದ ಸಮಿತಿ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ತಿಮ್ಮಣ್ಣ, ನಿರ್ದೇಶಕರುಗಳಾದ ರಾಮಣ್ಣ, ರಾಜಣ್ಣ, ತಿಮ್ಮಣ್ಣ, ಶ್ರೀರಂಗಪ್ಪ, ಹನುಮಣ್ಣ, ರಂಗೇಗೌಡ, ಪಾಂಡುರಂಗಪ್ಪ, ರಂಗಶಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.