ಶ್ರೀಸಾಮಾನ್ಯರ ಬದುಕು ಹಸನಾಗಲು ಕನ್ನಡ ಸಾಹಿತ್ಯ ಸಹಕಾರಿ
ತುಮಕೂರು, ಜು. ೨೦- ಕನ್ನಡ ಸಾಹಿತ್ಯ ಸಮೃದ್ಧವಾಗಿದ್ದು, ಜನ ಸಮುದಾಯದ ಬದುಕನ್ನು ಹಸನು ಮಾಡಿಕೊಳ್ಳಲು ಸಹಾಯಕವಾಗಿದೆ. ಇಂತಹ ಸಾಹಿತ್ಯದಲ್ಲಿನ ಸಹಬಾಳ್ವೆ, ಆದರ್ಶ ಮೌಲ್ಯಗಳು ಪ್ರತಿಯೊಬ್ಬ ಕನ್ನಡಿಗನ ಮನೆ-ಮನ ತಲುಪಲಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹೇಳಿದರು.
ತಾಲ್ಲೂಕಿನ ಕಸಬಾ ಹೋಬಳಿ, ಹಾರೋನಹಳ್ಳಿಯ ಬಸವೇಶ್ವರ ದೇವಾಲಯ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ಸಹಕಾರದೊಂದಿಗೆ ಕನ್ನಡ ನಡೆ ಶಾಲಾ-ಕಾಲೇಜು ಕಡೆ ಎಂಬ ವಿನೂತನ ಸಾಹಿತ್ಯ ದೀವಿಗೆ ಉದ್ಘಾಟನೆ ಹಾಗೂ ಪ್ರೊ. ಹ.ಬ.ಮಹದೇವಪ್ಪನವರ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಸತ್ವ, ಪ್ರಾಚೀನ ಕವಿಗಳ ಶಾಸ್ತ್ರ ಸಾಹಿತ್ಯ, ವಚನ ಸಾಹಿತ್ಯದ ನಡೆ ನುಡಿ ಸಿದ್ಧಾಂತ, ಕೀರ್ತನಾಕಾರರು ಹಾಗೂ ಆಧುನಿಕ ಕನ್ನಡ ಕವಿಗಳ ಕೃತಿಗಳಲ್ಲಿನ ಸಾರ ಸರ್ವಸ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ತುಮಕೂರು ಜಿಲ್ಲೆಯ ಸಾಹಿತ್ಯ ಪರಿಚಾರಕರಾಗಿ ಸಾರ್ಥಕ ಕೆಲಸ ಮಾಡಿದ ಪ್ರೊ. ಹ.ಬ.ಮಹದೇವಪ್ಪ ನವರು ಇಂದಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ. ಅಂತಹ ಸಾಧಕರ ಹಾದಿಯಲ್ಲಿ ನಡೆದು ಕನ್ನಡ ಸಾಹಿತ್ಯ ಸುಧೆಯನ್ನು ನಾವೆಲ್ಲರೂ ಬರಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಗೋವಿಂದರಾಯ ಶರಣ ಸಂದೇಶ ಹಾಗೂ ಪ್ರೊ. ಹ.ಬ.ಮಹದೇವಪ್ಪ ನವರ ಬದುಕು-ಬರಹ’ ಕುರಿತು ಉಪನ್ಯಾಸ ನೀಡಿ, ಅಧ್ಯಯನ, ಅಧ್ಯಾಪನ, ಸೇವೆ ಮತ್ತು ತ್ಯಾಗಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಿರುವ ಹ.ಬ.ಮಹದೇವಪ್ಪ ನವರು ತಮ್ಮ ಜೀವನದಲ್ಲಿ ಸಾರ್ಥಕತೆ ಕಂಡವರು. ದೀಪದಂತೆ ತಾನು ಉರಿದು ಇತರರ ಬಾಳಿಗೆ ಬೆಳಕಾಗಿ, ನಡೆದಂತೆ ನುಡಿಯುವ, ಸಮಾಜವನ್ನು ಶುದ್ಧೀಕರಿಸುವ ಶೋಷಿತ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಬದುಕನ್ನು ಬೆಳಗಿದ ಇವರ ಧೀಮಂತ ವ್ಯಕ್ತಿತ್ವ ಇಂದಿನ ಸಮಾಜಕ್ಕೆ ಮಾದರಿ ಎಂದು ಬಣ್ಣಿಸಿದರು.
ತುಮಕೂರನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಕನ್ನಡ ಸಾಹಿತ್ಯದ ಹಾಗೂ ವಚನ ಸಾಹಿತ್ಯದ ಆಶಯಗಳನ್ನು ಈಡೇರಿಸುವಲ್ಲಿ ಇವರ ಶ್ರಮ ಬಹು ದೊಡ್ಡದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಶೋಧಕರು ಹಾಗೂ ಆಯುರ್ವೇದ ವೈದ್ಯರಾದ ಡಾ. ಬಿ.ನಂಜುಂಡಸ್ವಾಮಿ ಮಾತನಾಡಿ, ತುಮಕೂರಿನ ಶರಣ ಪರಂಪರೆಯನ್ನು ಪರಿಚಯಿಸಿ, ವಚನ ಸಾಹಿತ್ಯ ಇಲ್ಲಿ ತನ್ನದೇ ಆದ ಅಸ್ತಿತ್ವವನ್ನು ಪಡೆದುಕೊಂಡಿರುವುದಕ್ಕೆ ಗೋಸಲ ಚನ್ನಬಸವೇಶ್ವರರು, ಎಡೆಯೂರು ಸಿದ್ದಲಿಂಗೇಶ್ವರರು, ಸಿದ್ಧಗಂಗೆಯ ಶ್ರೀ ಶಿವಕುಮಾರಸ್ವಾಮೀಜಿಗಳಾದಿಯಾಗಿ ಪ್ರೊ. ಹ.ಬ ಮಹದೇವಪ್ಪ ನವರಂತಹವರು ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದ ಸಂಚಾಲಕ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸಮೂಹ ಮಾಧ್ಯಮಗಳ ನಡುವೆ ತೊಡಗಿಕೊಂಡಿರುವ ಗ್ರಾಮೀಣ ಪ್ರದೇಶಗಳ ಜನರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಮನಸ್ಸಿಗೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಇಂತಹ ಕಾರ್ಯಕ್ರಮಗಳನ್ನು ಸಾಹಿತ್ಯ ಪರಿಷತ್ ನಿತ್ಯ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಇದಕ್ಕೆ ಕೈಜೋಡಿಸುವ ಸರ್ವರನ್ನೂ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಹಾರೋನಹಳ್ಳಿಯ ಹಿರಿಯ ಮುಖಂಡರಾದ ಶಿವಣ್ಣ, ಜಯಣ್ಣ, ಸಿದ್ದಲಿಂಗಪ್ಪ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ರಾಜೇಶ್ವರಿ, ಬಸವೇಶ್ವರ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರು, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಶಶಿಕುಮಾರ್ ಪ್ರಾರ್ಥಿಸಿ, ಕನ್ನಡ ಗೀತೆಗಳನ್ನು ಹಾಡಿದರು. ಮಿಮಿಕ್ರಿ ಈಶ್ವರಯ್ಯ ಕಾರ್ಯಕ್ರಮ ನಿರೂಪಿಸಿದರು.