ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಅನುಷ್ಠಾನಕ್ಕೆ ಆಗ್ರಹ
ಕುಣಿಗಲ್, ಜು. ೨೦- ಕನ್ನಡಿಗರಿಗೆ ಶೀಘ್ರದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ಉದ್ಯೋಗ ಕಲ್ಪಿಸುವುದನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡ ಹೇಳಿದರು.
ಕನ್ನಡ ಜ್ಯೋತಿ ಹಸಿರಾಯಿತು, ಕರ್ನಾಟಕ ಉಸಿರಾಗಲಿ, ಕನ್ನಡ ರಥ ಯಾತ್ರೆಯು ಅದ್ದೂರಿಯಾಗಿ ಎಡೆಯೂರಿನ ಗಡಿ ಭಾಗದಿಂದ ತಾಲ್ಲೂಕಿನ ಆಡಳಿತ ವರ್ಗ ಶಾಲಾ ವಿದ್ಯಾರ್ಥಿಗಳು ಬರ ಮಾಡಿಕೊಂಡು ಪಟ್ಟಣದ ಬಿಜಿಎಸ್ ಕಾಲೇಜ್ ಆವರಣದಿಂದ ಭವ್ಯ ಮೆರವಣಿಗೆಯಲ್ಲಿ ಗ್ರಾಮ ದೇವತೆ ವೃತ್ತದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರ ಏಕೀಕರಣ ಪೂರ್ಣಗೊಂಡ ೫೦ ವರ್ಷಗಳ ಹಿನ್ನೆಲೆಯಲ್ಲಿ ಭಾಷೆ ಅಭಿಮಾನ ವಿಸ್ತಾರವನ್ನು ಪ್ರತಿಯೊಬ್ಬ ವ್ಯಕ್ತಿಗೂ ತಲುಪುವ ಉದ್ದೇಶದಿಂದ ಈ ರಥಯಾತ್ರೆ ಕೈಗೊಂಡಿದ್ದು ನಾಡಿನ ಅಭಿವೃದ್ಧಿ ಶಕ್ತಿ ಬೆಳೆಯಲು ಈ ಒಂದು ರಥಯಾತ್ರೆಯೂ ಮಹತ್ವದ್ದಾಗಿದ್ದು ಮಕ್ಕಳು, ವಿದ್ಯಾರ್ಥಿಗಳು ಕನ್ನಡ ಭಾಷೆ ಅಭಿಮಾನ ಬೆಳೆಸಿಕೊಳ್ಳಬೇಕು. ರಾಜ್ಯ ಸರ್ಕಾರ ಕನ್ನಡಿಗರಿಗೆ ಮೀಸಲಾತಿ ಖಾಸಗಿ ಸಂಸ್ಥೆಯಲ್ಲಿ ಶೀಘ್ರದಲ್ಲಿ ಉದ್ಯೋಗ ಜಾರಿಗೆ ತರುವಂತಾಗಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ, ಮಕ್ಕಳು ಕನ್ನಡ ಉಳಿಸುವಂತಹ ಕಾರ್ಯವನ್ನು ಕೈಗೊಳ್ಳುವುದರಿಂದ ಈಗಾಗಲೇ ರಾಜ್ಯ ಸರ್ಕಾರ ಎಲ್ಲ ಹಂತದಲ್ಲೂ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನಗೊಳಿಸಿದ್ದು ಸುಮಾರು ೨೦೦೦ ವರ್ಷಗಳ ಕನ್ನಡ ಭಾಷೆಗೆ ಇತಿಹಾಸವಿದ್ದು ಯಾವುದೇ ಸಾಹಿತಿ ಲೇಖಕರು ಅನುಷ್ಠಾನಕ್ಕೆ ತಂದಂತಹ ಭಾಷೆಯಾಗಿರುವುದಿಲ್ಲ. ಕನ್ನಡ ಭಾಷೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ಹಳ್ಳಿ ಹಳ್ಳಿಯಲ್ಲೂ ಪ್ರಸರಿಸಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿಶ್ವನಾಥ್, ಕಾರ್ಯನಿರ್ವಹಣಾಧಿಕಾರಿ ಜೋಸೆಫ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಪ್ನಿಪಾಳ್ಯ ರಮೇಶ್, ಪುರಸಭೆ ಮುಖ್ಯಾಧಿಕಾರಿ ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ, ರೋಟರಿ ನರ್ತನಪೂರಿ ಅಧಿಯಕ್ಷ ಬಿ.ಎಂ. ಹುಚ್ಚೇಗೌಡ, ವರದರಾಜು, ಸ್ನೇಹ ಕಲಾ ಪ್ರತಿಷ್ಠಾನದ ಅಧ್ಯಕ್ಷ ದಿನೇಶ್‌ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.