೭ನೇ ವೇತನ ಆಯೋಗ ಜಾರಿ: ಸರ್ಕಾರಿ ನೌಕರರ ಹರ್ಷ
ಚಿಕ್ಕನಾಯಕನಹಳ್ಳಿ, ಜು. ೨೦- ರಾಜ್ಯ ಸರ್ಕಾರಿ ನೌಕರರ ಬಹುದಿನದ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ೭ನೇ ವೇತನ ಆಯೋಗದ ವರದಿಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯಂತೆ ಸಚಿವ ಸಂಪುಟ ಸಭೆಯಲ್ಲಿ ಜಾರಿ ಮಾಡಿದ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸದಸ್ಯರ ತೀರ್ಮಾನಕ್ಕೆ ನೌಕರರ ಸಂಘದ ತಾಲ್ಲೂಕು ಘಟಕ ಹರ್ಷ ವ್ಯಕ್ತಪಡಿಸಿದೆ.
ಈ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ಪರಶಿವಮೂರ್ತಿ ಮಾತನಾಡಿ, ಸಂಘದ ನಿರಂತರ ಹೋರಾಟದ ಫಲವಾಗಿ ಕಳೆದ ಲೋಕಸಭಾ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮತ್ತು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ನೌಕರರ ಸಂಘದ ಬೃಹತ್ ಮಹಾ ಸಮ್ಮೇಳನದಲ್ಲಿ ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ೭ನೇ ವೇತನ ಆಯೋಗದ ವರದಿಗೆ ಅಸ್ತು ಎಂದಿದೆ ಎಂದರು.
ಇದರಿಂದ ರಾಜ್ಯದ ಸಮಸ್ತ ೬ ಲಕ್ಷ ಸರ್ಕಾರಿ ನೌಕರರು, ನಿವೃತ್ತ ನೌಕರರು, ನಿಗಮ ಮಂಡಳಿಯ ನೌಕರರು ಸೇರಿ ಸುಮಾರು ೧೦ ಲಕ್ಷಕ್ಕೂ ಅಧಿಕ ನೌಕರರ ಬಾಳಿಗೆ ಬೆಳಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮತ್ತು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ ರಾಜ್ಯದ ಎಲ್ಲಾ ಸಚಿವರಿಗೆ ಮತ್ತು ತಾಲ್ಲೂಕಿನಲ್ಲಿ ಸಂಘದ ಮನವಿಯನ್ನು ಪಡೆದು ಮುಖ್ಯಮಂತ್ರಿ ಜತೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿ, ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ ಸಚಿವರಾದ ಸಚಿವ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ನವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳಿಗೆ ಮತ್ತು ಎಲ್ಲ ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ನಿರಂತರ ಹೋರಾಟ ಮಾಡಿ ಹಗಲಿರುಳು ನೌಕರರ ಪರ ಶ್ರಮಿಸಿದ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ರವರಿಗೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ.