ವಿವಿಧ ಬೇಡಿಕೆ ಈಡೇರಿಸುವಂತೆ ಗ್ರಾಮ ಆಡಳಿತಾಧಿಕಾರಿಗಳ ಪ್ರತಿಭಟನೆ
ಬೀದರ:ಸೆ.28: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಗ್ರಾಮ ಆಡಳಿತಾಧಿಕಾರಿಗಳು ಜಿಲ್ಲಾ ಕಚೇರಿಯ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿದರು.
ಈ ಕುರಿತು ಗ್ರಾಮ ಆಡಳಿತಾಧಿಕಾರಿಗಳ ಜಿಲ್ಲಾಧ್ಯಕ್ಷ ಬಬ್ರುವಾಹನ್ ಮಾತನಾಡಿ ಗ್ರಾಮಾಡಳಿತ ಅಧಿಕಾರಿಗಳು ಕಂದಾಯ ಇಲಾಖೆಯಲ್ಲಿ ದಿನದ 15-18 ಗಂಟೆಗಳ ಇಲಾಖೆಯ ಕೆಲಸದಲ್ಲಿ ನಿರತರಾಗಿದ್ದಾರೆ. ಅಲ್ಲದೇ ತಾಂತ್ರಿಕ ಅಧಿಕಾರಿಗಳು ಮಾಡುವ ಕೆಲಸಗಳನ್ನೂ ಸಹ ಮಾಡುತ್ತಿದ್ದಾರೆ. ಆದರೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನವನ್ನು ಮಾತ್ರ ನೀಡುತ್ತಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ, ಗುಣಮಟ್ಟದ ಟೇಬಲ್, ಕುರ್ಚಿ ಮತ್ತು ಅಲ್ಮೆರ, ಉತ್ತಮ ಗುಣಮಟ್ಟದ ಮೊಬೈಲ್, ಗೂಗಲ್ ಕ್ರೋಮ್ ಬುಕ್, ಲ್ಯಾಪ್‍ಟಾಪ್, ಪ್ರಿಂಟರ್, ಸ್ಕ್ಯಾನರ್ ಒದಗಿಸಬೇಕು. ಕೆಸಿಎಸ್‍ಆರ್ ನಿಯಮಾವಳಿ ಪ್ರಕಾರ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸಲು ಮೆಮೊ ಹಾಕಬಾರದು. ರಜಾ ದಿನಗಳಲ್ಲಿ ಕೆಲಸ ಮಾಡುವಂತೆ ಒತ್ತಾಯಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.
ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು. ರಾಜಸ್ವ ನಿರೀಕ್ಷಕರ ಹುದ್ದೆಗೆ ತಕ್ಷಣವೇ ಬಡ್ತಿ ನೀಡಬೇಕು. ಅಂತರ್ ಜಿಲ್ಲೆ, ಪತಿ-ಪತ್ನಿ ಪ್ರಕರಣಗಳ ವರ್ಗಾವಣೆಯಾಗಿ ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ಮಾಡಬೇಕು. ವಿಶೇಷ ಚೇತನ ಹಾಗೂ ತೀವ್ರ ಅನಾರೋಗ್ಯದ ಸಮಸ್ಯೆ ಇರುವ ಪರಕರಣಗಳ ನಿಯೋಜನೆಯನ್ನು ಮಾಡಿಕೊಡುವುದು. ಕೆಲಸದ ಅವಧಿಯ ಮುನ್ನ ಹಾಗೂ ಕೆಲಸದ ಮುಕ್ತಾಯದ ನಂತರ ನಡೆಸಲಾಗುವ ಎಲ್ಲಾ ಬಗೆಯ ವರ್ಚುಯಲ್ ಸಭೆಗಳನ್ನು ಕಡ್ಡಾಯವಾಗಿ ನಿಷೇಧಿಸುವುದು. ಮಾತೃ ಇಲಾಖೆಯ ಕೆಲಸಗಳೊಂದಿಗೆ ಸರ್ಕಾರದ ಆದೇಶದಂತೆ ಇತರೆ ಇಲಾಖೆಗಳ ಕೆಲಸಗಳನ್ನು ನಿರ್ವಹಿಸುವ ಚುನಾವಣೆ, ಅನಾವೃಷ್ಟಿ ಮುಂತಾದ ಕೆಲಸ ಕಾರ್ಯಗಳನ್ನು ಮಾಡುವಾಗ ಸಂಭವಿಸಬಹುದಾದ ಮಾರಣಾಂತಿಕ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಪತ್ತಿನ ಭತ್ಯೆ ನೀಡುವುದು. ಕರ್ತವ್ಯ ನಿರ್ವಹಿಸುವ ವೇಳೆ ಜೀವಹಾನಿಯಾದ ಗ್ರಾಮಾಡಳಿತ ಅಧಿಕಾರಿಗಳ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡುವುದು, ಪ್ರಯಾಣ ಭತ್ಯೆಯ ದರವನ್ನು ಹೆಚ್ಚಿಸುವುದು.ಇಂದಿನ ಜನಸಂಖ್ಯೆ ಜನಗುಣವಾಗಿ ಕಂದಾಯ ಇಲಾಖೆ ಹುದ್ದೆಗಳನ್ನು ಪರಿಷ್ಕರಿಸಿ, ಪುನರ್ ವಿಂಗಡಣೆ ಮಾಡಿ ಹೆಚ್ಚುವರಿ ಹುದ್ದೆಗಳನ್ನು ಸೃಜಿಸುವುದು. ದಫ್ತರ್ ಹಾಗೂ ಜಮಾಬಂದಿಯನ್ನು ರದ್ದುಪಡಿಸುವುದು, ಮ್ಯಟೇಶನ್ ಅವಧಿ ದಿನವನ್ನು ವಿಸ್ತರಣೆ ಮಾಡುವುದು ಹಾಗೂ ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆಯನ್ನು ಒದಗಿಸುವುದು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ 26-9-2024 ರಂದ ಎಲ್ಲಾ ಬಗೆಯ ಮೊಬೈಲ್‍ಆಪ್ ಹಾಗೂ ವೆಬ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಿ ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯ ವ್ಯಾಪ್ತಿ ಹಮ್ಮಿಕೊಳ್ಳಲಾಗಿದ್ದು ಸರ್ಕಾರ ಈ ಕೂಡಲೇ ಕಡ್ಡಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಇಂದು ಜಿಲ್ಲಾಧಿಕಾರಿಗಳ ಕಚೇರಿಮುಂದೆ ಬೀದರ ಜಿಲ್ಲಾಧ್ಯಕ್ಷ ಬಬ್ರುವಾಹನ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಸಯ್ಯಾ ಸ್ವಾಮಿ, ಖಜಾಂಚಿ ಬಸವರಾಜ ಬೆಳಕೇರೆ, ಜಿಲ್ಲಾ ಸಂಘದ ಪ್ರಮುಖರಾದ ಪ್ರದೀಪ ಅಂಗಡಿ , ಮಹಾಂತೇಶ ಕುಂಬಾರ, ನರಸಿಮಲು, ಧರ್ಮಣ್ಣಾ, ಜಗದೀಶ ಪವಾರ, ಮಹಾನಂದ,ಯಾಸೀರ, ಅರುಣಕುಮಾರ, ವೀರೇಶ, ಕಾಶಿನಾಥ ಚಡಕಾಪೂರೆ, ನಾಮದೇವ ಮೇತ್ರಿ, ನಿಂಗಪ್ಪಾ ಗಬಸಾವಳಗಿ, ಶಶಿಕುಮಾರ, ಅಹ್ಮದ ಸಾಬ ಮುಲ್ಲಾ, ಕೃಷ್ಣಾ, ಕಾಶಿನಾಥ ಕಾಮಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.