ಮಲ್ಲಾಬಾದ್ ಏತ ನೀರಾವರಿ ಯೋಜನೆ ತ್ವರಿತ ಜಾರಿಗೆ ಆಗ್ರಹ
ಕಲಬುರಗಿ:ಜು.19: ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷಿ ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರವು 330 ಕೋಟಿ ರೂ.ಗಳ ಅನುಮೋದನೆ ನೀಡಿದ್ದು ಸ್ವಾಗತಾರ್ಹವಾಗಿದೆ. ತಕ್ಷಣವೇ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಕನ್ನಡಪರ ಸಂಘಟನೆಗಳ ಹೋರಾಟಗಾರ ಅಮೃತ್ ಪಾಟೀಲ್ ಸಿರನೂರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಎಲ್ಲ ಸರ್ಕಾರಗಳು ಯೋಜನೆಯನ್ನು ನಿರ್ಲಕ್ಷಿಸಿದ್ದವು. ಈಗ ರಾಜ್ಯ ಸರ್ಕಾರವು ಯೋಜನೆಗೆ 330 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದು ಶ್ಲಾಘನೀಯ ಎಂದರು.
ಯೋಜನೆಯ ಹಂತ 1,2 ಮತ್ತು 3ರ ಬಾಕಿ ಉಳಿದಿರುವ ವಿತರಣಾ ಕಾಮಗಾರಿಗಳ ಅನುಷ್ಠಾನಕ್ಕೆ ಅನುದಾನವೂ ನಿಗದಿಪಡಿಸಲು ಸೂಚಿಸಲಾಗಿದೆ. ಯೋಜನೆ ಪೂರ್ಣಗೊಳಿಸಿ 33, 860 ಹೆಕ್ಟೆರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಮಲ್ಲಾಬಾದ್ ಏತ ನೀರಾವರಿ ಯೋಜನೆ ಮೂಲಕ ಯಡ್ರಾಮಿ ತಾಲ್ಲೂಕಿನ 38 ಗ್ರಾಮಗಳು ಮತ್ತು ಜೇವರ್ಗಿ ತಾಲೂಕಿನ 20 ಗ್ರಾಮಗಳ ರೈತರ ಜಮೀನುಗಳಿಗೆ ನೀರು ಒದಗಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕೃಷಿ ಉಪಕರಣಗಳ ಮಾರಾಟದಲ್ಲಿ ಹೆಚ್ಚಿನ ದರ ಪಡೆಯಲಾಗುತ್ತಿದೆ. ಈ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಸಂಬಂಧಪಟ್ಟವರು ಹೆಚ್ಚಿನ ನಿಗಾ ವಹಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ್ ಗಂವ್ಹಾರ್, ಸಂದೀಪ್ ಪಾಟೀಲ್, ಮಲ್ಲಿಕಾರ್ಜುನ್ ಸಾರವಾಡ್, ಮುಂತಾದವರು ಉಪಸ್ಥಿತರಿದ್ದರು.