ಸಮಾಜ ಬೆಳವಣಿಗೆಯಲ್ಲಿ ಪತ್ರಿಕಾ ರಂಗದ ಕೊಡುಗೆ ಶ್ರೇಷ್ಠವಾದದ್ದು : ಪಟ್ಟದೇವರು
ಸಂಜೆವಾಣಿ ವಾರ್ತೆ
ಔರಾದ್ :ಜು.20: ಪತ್ರಿಕಾರಂಗ ಸರಕಾರ ಹಾಗೂ ಸಮಾಜದ ನಡುವಿನ ಸಂಪರ್ಕದ ಕೊಂಡಿಯಂತಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದ ಬೆಳವಣಿಗೆಯಲ್ಲಿ ಪತ್ರಿಕಾ ರಂಗದ ಕೊಡುಗೆ ಶ್ರೇಷ್ಠವಾಗಿದೆ ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ವರದಿಗಳನ್ನು ಸರಕಾರದ ಹಾಗೂ ಜನಪತ್ರಿನಿಧಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ವರದಿಗಾರರು ಅವಿರತವಾಗಿ ಶ್ರಮಿಸುತ್ತಿದ್ದಾರೆ,
ಜನರಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪತ್ರಿಕೆಗಳು, ಸಮಾಜವನ್ನು ಕಾಡುತ್ತಿರುವ ಭ್ರಷ್ಟಾಚಾರ, ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಉಂಟು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದರು. ಔರಾದ ತಾಲೂಕಿನ ಪತ್ರಕರ್ತರು ಗಡಿ ಭಾಗದ ಸಮಸ್ಯೆಗಳ ಬಗ್ಗೆ ಸುದ್ದಿಗಳು ಮಾಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ ಎಂದು ಪತ್ರಕರ್ತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಸಾಗರ ಖಂಡ್ರೆ ಮಾತನಾಡಿ, ಪತ್ರಕರ್ತರ ವರದಿ ಜನರ ಸಂವೇದನೆಗಳೊಂದಿಗೆ ಇರುವುದರಿಂದ ಸಮಾಜದಲ್ಲಿನ ಸೂಕ್ಷ್ಮತೆಗಳ ಬಗ್ಗೆ ಒಳನೋಟವಿರುತ್ತದೆ. ಈ ಕಾರಣಕ್ಕಾಗಿ ಪತ್ರಕರ್ತರ ವರದಿ ಸಮಾಜದ ಕನ್ನಡಿಯಾಗಿದೆ ಎಂದರು. ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ತುಂಬ ದೊಡ್ಡದು. ಪತ್ರಕರ್ತರ ಲೇಖನಿಗೆ ಬಹುದೊಡ್ಡ ಹೊಣೆ ಇದೆ. ಅದನ್ನು ಎಚ್ಚರದಿಂದ ಬಳಸಬೇಕು ಎಂದರು. ಯಾವುದೇ ಪಕ್ಷವಿರಲಿ ಎಲ್ಲರ ಬಗ್ಗೆ ಒಳ್ಳೆಯದು, ಕೆಟ್ಟದ್ದು ಹೊರಗೆ ತೆಗೆಯುವ ಕೆಲಸ ಪತ್ರಕರ್ತರು ಮಾಡುತ್ತಾರೆ. ಅಂತಹ ಪತ್ರಕರ್ತರಿಂದ ಸಮಾಜದಲ್ಲಿ ಪರಿವರ್ತನೆಯಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ವಹಿಸಿ ಮಾತನಾಡಿದರು. ಪತ್ರಕರ್ತ ಮನ್ಮಥ ಸ್ವಾಮಿ ಮಾತನಾಡಿದರು. ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ, ತಾಪಂ ಇಒ ಬಿರೇಂದ್ರಸಿಂಗ್ ಠಾಕೂರ್, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪತ್ರಕರ್ತರಾದ ಶರಣಪ್ಪ ಚಿಟಮೇ, ಚನ್ನಬಸವ ಮೊಕ್ತೆದಾರ್, ಸುನಿಲ ಜಿರೋಬೆ, ಅಮರೇಶ್ವರ ಚಿದ್ರೆ, ಅಮರ ಸ್ವಾಮಿ ಸ್ಥಾವರಮಠ, ಸುಧೀರ ಪಾಂಡ್ರೆ, ಅಹ್ಮದ್, ರವಿಕುಮಾರ ಮಠಪತಿ, ರಾಚಯ್ಯ ಸ್ವಾಮಿ, ಸೂರ್ಯಕಾಂತ ಎಕಲಾರ, ಶಿವಕುಮಾರ ಸಾದುರೆ, ಅಲೀಂಪಾಶಾ, ಶಿವಾನಂದ ಬೇಂದ್ರೆ, ಅಂಬಾದಾಸ ಉಪ್ಪಾರ, ಅಂಬಾದಾಸ ನೆಳಗೆ, ರವಿಕುಮಾರ ಶಿಂಧೆ, ರವಿ ವಲ್ಲೇಪೂರೆ, ಲಕ್ಷ್ಮಣ ರಾಠೋಡ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡರು. ವಿಶ್ವನಾಥ ಬಿರಾದಾರ ಪತ್ರಕರ್ತರ ಕುರಿತು ಕವನ ಹೇಳಿದರು. ಬಸವೇಶ್ವರ ಡಿಇಡಿ ಕಾಲೇಜಿನ ವಿದ್ಯಾರ್ಥಿ ನೀಲಾಂಬಿಕಾ ಕುಂಬಾರ ಪ್ರಾರ್ಥನಾ ಗೀತೆ ಹಾಡಿದರು. ಪರಮೇಶ್ವರ ವಿಳಾಸಪೂರೆ ನಿರೂಪಿಸಿದರು. ರಿಯಾಜ್ ಪಾಶಾ ಸ್ವಾಗತಿಸಿ, ವಂದಿಸಿದರು.
ಲೇಖನಿ ತಪಸ್ವಿ ಹಾಗೂ ಚೇತನ ಶ್ರಿ ಪ್ರಶಸ್ತಿ ಪ್ರದಾನ
ಕಲಬುರ್ಗಿ ವಿಭಾಗದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಹಿರಿಯ ಪತ್ರಕರ್ತರಾದ ಸುಭಾಷ ಬಣಗಾರ ಅವರಿಗೆ ಲೇಖನಿ ತಪಸ್ವಿ, ಹಾಗೂ ಸಂಘದ ರಾಜ್ಯ ಉಪಾಧ್ಯಕ್ಷರಾದ ಹಿರಿಯ ಪತ್ರಕರ್ತ ಭವಾನಿಸಿಂಗ್ ಠಾಕೂರ ಅವರಿಗೆ ಚೇತನ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಖಂಡ್ರೆಗೆ ಸತ್ಕಾರದ ಸುರಿಮಳೆ
ಸಂಸದ ಸಾಗರ ಖಂಡ್ರೆ ಅವರು ಸಂಸದರಾದ ಬಳಿಕ ಔರಾದ್ ತಾಲೂಕಿಗೆ ಪ್ರಥಮವಾಗಿ ಆಗಮಿಸಿದರಿಂದ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ನಾನಾ ಸಂಘಟನೆಯ ಕಾರ್ಯಕರ್ತರು, ಸಂಘ ಸಂಸ್ಥೆಯ ಅಧ್ಯಕ್ಷರು, ಮುಖಂಡರು ಸತ್ಕರಿಸಿದರು. ಈ ವೇಳೆ ಸತ್ಕಾರದ ತಾಲೂಕಿನ ಗ್ರಾಮೀಣ ಭಾಗದ ಜನರು ಆಗಮಿಸಿರುವದು ಕಂಡು ಬಂತು.