ಗುರಿಯಿಲ್ಲದ ಗುರಿ ಸಾಧಿಸದ ಜೀವನ ವ್ಯರ್ಥ : ರಂಭಾಪುರಿ ಜಗದ್ಗುರುಗಳು
ಕಲಬುರಗಿ:ಜು.19:ವೀರಶೈವ ಧರ್ಮದಲ್ಲಿರುವ ಉದಾತ್ತ ತತ್ವಗಳು ಜೀವನದ ಶ್ರೇಯಸ್ಸಿಗೆ ಕಾರಣವಾಗಿವೆ. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಗುರಿಯಿಲ್ಲದ ಗುರಿ ಸಾಧಿಸದ ಜೀವನ ವ್ಯರ್ಥ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಮಹಾಗಾಂವ್ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಸಕಲರ ಬಾಳಿಗೆ ಬೆಳಕು ತೋರಿವೆ. ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸುವ ಉದಾತ್ತ ಗುರಿ ಹೊಂದಿದೆ. ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿ ಮುನ್ನಡೆದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಬದುಕು ಭಗವಂತನ ಕೊಡುಗೆ. ಅರಿವು ಆದರ್ಶಗಳಿಂದ ಬದುಕು ಸಮೃದ್ಧಿಗೊಳ್ಳಬೇಕು. ಸುಖ ಶಾಂತಿದಾಯಕ ಬದುಕಿಗೆ ಧರ್ಮ ಪರಿಪಾಲನೆ ಅವಶ್ಯಕತೆ ಇದೆ. ಮನುಷ್ಯ ಜೀವನದಲ್ಲಿ ಧರ್ಮ ದೇವರು ಮತ್ತು ಗುರುವನ್ನು ಎಂದಿಗೂ ಮರೆಯಬಾರದು. ಧರ್ಮ ಸೂಜಿ ಇದ್ದಂತೆ. ಜಾತಿ ಕತ್ತರಿ ಇದ್ದಂತೆ. ಧರ್ಮ ಜೋಡಿಸುತ್ತ ಹೋದರೆ ಜಾತಿ ಸಮಾಜವನ್ನು ವಿಘಟಿಸುತ್ತದೆ. ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ನಡೆಯಬಾರದು. ದೇಶದಲ್ಲಿರುವ ಧರ್ಮಗಳು ಆಚರಣೆಗಳು ಬೇರೆ ಬೇರೆಯಾಗಿದ್ದರೂ ಮಾನವ ಕಲ್ಯಾಣವೇ ಅವುಗಳ ಮೂಲ ಉದ್ದೇಶವಾಗಿದೆ ಎಂಬುದನ್ನು ಮರೆಯಬಾರದು ಎಂದರು.
ನಾಗನೂರಿನ ಅಲ್ಲಮಪ್ರಭು ಶಿವಯೋಗಿ, ಮುಗಳಿ ಅಭಿನವ ಬಸವಲಿಂಗ ಶಿವಾಚಾರ್ಯರು, ಲಿಂಗಸುಗೂರಿನ ಮಾತೆ ನಂದಿಕೇಶ್ವರಿ,ಮಹಾಗಾಂವನ ಕುಮಾರ ಮುತ್ಯಾ, ಕಳ್ಳಿಮಠದ ವಿರೂಪಾಕ್ಷ ದೇವರು, ವಿ.ಪ.ಮಾಜಿ ಸದಸ್ಯ ಅಮರನಾಥ ಪಾಟೀಲ, ಜಿ.ಪಂ.ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್, ಪಿಎಸ್‍ಐ ಆಶಾ ರಾಠೋಡ, ಪ್ರಮುಖರಾದ ಅಣ್ಣಾರಾವ ಬಿರಾದಾರ, ಮುರುಗೇಂದ್ರ ವೀರಶೆಟ್ಟಿ, ಗುರುಪಾದಪ್ಪ ಕಿಣಗಿ, ಗಿರೀಶ ಪಾಟೀಲ್, ಮಲ್ಲಿಕಾರ್ಜುನ ಮರತೂರಕರ, ನರೇಶ ಹರಸೂರಕರ, ನಂದನಕುಮಾರ ಹರಸೂರಕರ, ವೀರಣ್ಣ ಉಚ್ಛದ ಉಪಸ್ಥಿತರಿದ್ದರು.
ಅಮೃತಪ್ಪ ಮಲ್ಕಪ್ಪಗೋಳ ಇವರಿಂದ ಸ್ವಾಗತ, ಅಂಬಾರಾಯ ಮಡ್ಡೆ ಇವರಿಂದ ನಿರೂಪಣೆ, ಭೂಮಿಕಾ ಸಂಗಡಿಗರಿಂದ ಪ್ರಾರ್ಥನೆ ಜರುಗಿದವರು.
ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಭವ್ಯ ಸಾರೋಟ ಮೆರವಣಿಗೆ ಜರುಗಿತು.