ಕಲಬುರಗಿಯಲ್ಲಿ ನಿರ್ಮಾಣವಾಗಿರುವ ಪರೀಕ್ಷಾಪೂರ್ವ ತರಬೇತಿ ಕೇಂದ್ರ ಶೀಘ್ರ ಕಾರ್ಯಾರಂಭಿಸಿ: ಪ್ರಿಯಾಂಕ್‌ ಖರ್ಗೆ
ಕಲಬುರಗಿ:ಜು.19: ಸಮಾಜಕಲ್ಯಾಣ ಇಲಾಖೆ ಕಲಬುರಗಿಯಲ್ಲಿ ನಿರ್ಮಾಣ ಮಾಡಿರುವ ನೈಸ್‌ (ನಾಗಾವಿ ಇನ್ಸಿಟ್ಯೂಟ್‌ ಆಫ್‌ ಕಾಂಪಿಟೇಟಿವ್‌ ಎಕ್ಸಾಮಿನೇಷನ್ಸ್‌) ಪರೀಕ್ಷಾಪೂರ್ವ ತರಬೇತಿ ಕೇಂದ್ರವನ್ನು ಕೋಡಲೇ ಕಾರ್ಯಾರಂಭಿಸಲು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಹಾಗು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಕಟ್ಟಡ ನಿರ್ಮಾಣ ಪೂರೈಸಿದ್ದರೂ, ಬಹು ನಿರೀಕ್ಷಿತ ತರಬೇತಿ ಕೇಂದ್ರ ಆರಂಭಗೊಳ್ಲದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಚಿವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದಲೇ ಈ ಕೇಂದ್ರವನ್ನು ನಡೆಸಲು ಸಿದ್ಧರಿರುವುದಾಗಿ ಹೇಳಿದರು.
ಐಎಎಸ್‌, ಕೆಎಎಸ್‌ ಸೇರಿದಂತೆ ಸ್ಪರ್ಧಾತ್ಮಕ ಹಾಗೂ ಇನ್ನಿತರ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ನಡೆಸಲು ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗಿರುವ ಈ ತರಬೇತಿ ಕೇಂದ್ರವನ್ನು ಕೂಡಲೇ ಆರಂಭಿಸಬೇಕೆಂದು ಸಚಿವ ಪ್ರಿಯಾಂಕ್‌ ಖರ್ಗೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ.ರಾಕೇಶ್‌ಕುಮಾರ್‌ ಅವರಿಗೆ ಸೂಚಿಸಿದರು. ಕಲಬುರಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಈ ಸಂಬಂಧ ಶೀಘ್ರ ನಿರ್ಧಾರ ಕೈಗೊಂಡು ತರಬೇತಿ ಕೇಂದ್ರವನ್ನು ಆರಂಭಿಸಲು ಸಚಿವರು ಸಲಹೆ ಮಾಡಿದರು.
ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡುವ ಅವಶ್ಯಕತೆಯಿದ್ದು, ತಮ್ಮ ಅಧ್ಯಕ್ಷತೆಯಲ್ಲಿನ 371ಜೆ ಸಂಬಂಧಿಸಿದ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸುವದಾಗಿ ಸಚಿವರು ತೀಳಿಸಿದರು.
ಹಾಸ್ಟೆಲ್‌ಗಳು ಹಾಗೂ ವಸತಿಶಾಲೆಗಳಲ್ಲಿ ಸೌಲಭ್ಯಗಳ ಕೊರತೆ, ಕಟ್ಟಡಗಳ ದುರಸ್ತಿ, ಶಿಥಿಲ ಕಟ್ಟಡಗಳ ಸ್ಥಳಗಳಲಿ ಹೊಸ ಕಟ್ಟಡಗಳ ನಿರ್ಮಾಣ ಮುಂತಾದವುಗಳನ್ನು ಕೂಲಂಕುಶವಾಗಿ ಗಮನಿಸಿ ಮೂಲಭೂತ ಸೌಲಭ್ಯಗಳ ನೀಲನಕ್ಷೆ ತಯಾರಿಸಿ ಸಲ್ಲಿಸಲು ಸಚಿವರು ಸೂಚನೆ ನೀಡಿದರು. ಕೆಲವು ಹಾಸ್ಟೆಲ್‌ಗಳು ಹಾಗೂ ವಸತಿಗೃಹಗಳಲ್ಲಿ ಹಾಸಿಗೆ, ಹೊದ್ದಿಕೆ, ಜಮಖಾನೆ ಹಾಗೂ ಪೀಠೋಪಕರಣಗಳ ಕೊರತೆಯಿರುವುದನ್ನೂ ನೀಲನಕ್ಷೆಯಲ್ಲಿ ಸೇರಿಸಿಕೊಳ್ಳಲು ಸಚಿವರು ನಿರ್ದೇಶನ ನೀಡಿದರು. ಕಳೆದ ಐದಾರು ವರ್ಷಗಳಿಂದ ಹಲವು ಕಟ್ಟಡಗಳ ನಿರ್ಮಾಣ ವಿಳಂಬವಾಗಿರುವುದನ್ನು ಪರಿಶೀಲಿಸಲು ಮೂರನೆ ವ್ಯಕ್ತಿಗಳಿಂದ ತನಿಖೆ (ಥರ್ಡ್‌ ಪಾರ್ಟಿ ಇನ್ಸಪೆಕ್ಷನ್)‌ ನಡೆಸಲು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರ್ನುಮ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸತ್ಯವತಿ, ಆಯುಕ್ತ ದಯಾನಂದ್‌, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ.ರಾಕೇಶ್‌ ಕುಮಾರ್‌, ಕ್ರೈಸ್‌ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಲತಾಕುಮಾರಿ, ಕಲಬುರಗಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವರ್‌ಸಿಂಗ್‌ ಮೀನಾ, ಅಲ್ಪಸಂಖ್ಯಾತರ ಇಲಾಖೆಯ ಆಯುಕ್ತ ಜಿಲಾನಿ ಹೆಚ್.ಮೊಕಾಶಿ ಹಾಗೂ ಕಲಬುರಗಿ ಜಿಲ್ಲೆಯ ಅಧಿಕಾರಿಗಳು ಭಾಗವಹಿಸಿದ್ದರು.