ಅಗ್ನಿಪಥ ಯೋಜನೆಗೆ ಮಾಜಿ ಸೈನಿಕರ ಸಂಪೂರ್ಣ ಬೆಂಬಲ: ಕಾಂಗ್ರೆಸ್ ಟೀಕೆಗೆ ವಿರೋಧ
ಕಲಬುರಗಿ:ಜು.19: ಅಗ್ನಿಪಥ ಯೋಜನೆಯನ್ನು ಕಸದ ಬುಟ್ಟೆಗೆ ಹಾಕಬೇಕು ಎಂಬ ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ರಾಹುಲ್‍ಗಾಂಧಿ ಅವರ ಹೇಳಿಕೆ ಖಂಡನಾರ್ಹ ಎಂದು ಬಿಜೆಪಿ ಪೂರ್ವ ಸೈನಿಕ ಪ್ರಕೋಷ್ಠ ರಾಜ್ಯ ಸಮಿತಿ ಕಾರ್ಯಕಾರಿ ಸದಸ್ಯ ಬಸವರಾಜ್ ಬಿರಾದಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯು ಅತ್ಯುತ್ತಮವಾಗಿದೆ. ಯೋಜನೆಯಿಂದ ಸೈನಿಕರಿಗೆ ಹಾಗೂ ಮಾಜಿ ಸೈನಿಕರಿಗೆ ಒಳ್ಳೆಯದಾಗುತ್ತದೆ ಎಂದರು.
ದೇಶದ ಯುವ ಸಮೂಹದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿನ ಕೇಂದ್ರ ಸರ್ಕಾರವು 2022ರ ಜುಲೈನಲ್ಲಿ ಯೋಜನೆಯನ್ನು ಜಾರಿಗೆ ತಂದಿದೆ. ಇದರಲ್ಲಿ ನಾಲ್ಕು ವರ್ಷದ ಅವಧಿಗೆ ಯುವಕರನ್ನು ಅಗ್ನಿವೀರರನ್ನಾಗಿ ಸೇನೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆ ಅವಧಿಯಲ್ಲಿ ಮಾಸಿಕ ವೇತನ 25000ರೂ.ಗಳಿಂದ 40,000ರೂ.ಗಳವರೆಗೆ ಹಂತ, ಹಂತವಾಗಿ ನೀಡಲಾಗುತ್ತದೆ ಮತ್ತು ನಾಲ್ಕು ವರ್ಷ ಸೇವೆ ಪೂರ್ಣಗೊಂಡ ನಂತರ ಶೇಕಡಾ 25ರಷ್ಟು ಅಗ್ನಿವೀರರನ್ನು ಖಾಯಂಗೊಳಿಸಿ ಶೇಕಡಾ 75ರಷ್ಟು ಅಗ್ನಿವೀರರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗುವುದು. ಆ ಸಮಯದಲ್ಲಿ ಬಿಡುಗಡೆಗೊಂಡ ಅಗ್ನಿವೀರರಿಗೆ ಹನ್ನೊಂದು ಲಕ್ಷ ರೂ.ಗಳನ್ನು ಕೊಡಲಾಗುತ್ತದೆ ಎಂದು ಅವರು ಹೇಳಿದರು.
ಕಾರ್ಗಿಲ್ ಯುದ್ಧದ ನಂತರ ಯುದ್ಧದ ಸಮಯದಲ್ಲಿ ಪರಿಸ್ಥಿತಿ ತಿಳಿದುಕೊಳ್ಳಲು ನೇಮಿಸಿದ ಆಯೋಗ ಕೊಟ್ಟ ಶಿಫಾರಸ್ಸಿನ ಮೇರೆಗೆ ಬೇರೆ ದೇಶಗಳ ಸೈನ್ಯದ ಜೊತೆಗೆ ಹೋಲಿಸಿದರೆ ನಮ್ಮ ಸೈನಿಕರ ಸರಾಸರಿ ವಯಸ್ಸು 32ರಿಂದ 34 ಇದೆ. ಬೇರೆ ದೇಶಗಳ ಸರಾಸರಿ ವಯಸ್ಸು 26ರಿಂದ 28 ಇದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಅಗ್ನಿಪಥ ಯೋಜನೆ ಜಾರಿಗೆ ತರಲಾಗಿದೆ. ಯೋಜನೆ ಜಾರಿಗೆ ಬಂದ ನಂತರ ನಮ್ಮ ದೇಶದ ಸೈನಿಕರ ಸರಾಸರಿ ವಯಸ್ಸು 26 ಆಗಲಿದೆ ಎಂದು ಅವರು ತಿಳಿಸಿದರು.
ಯೋಜನೆಯಿಂದ ಯುವಕರಿಗೆ ಸೈನಿಕ ತರಬೇತಿ ಜೊತೆಗೆ ಶಿಸ್ತು, ದೇಶಭಕ್ತಿ, ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತದೆ. ನಾಲ್ಕು ವರ್ಷಗಳ ಸೇವೆ ನಂತರ ಹೊರಬಂದ ಅಗ್ನಿವೀರರನ್ನು ಕೇಂದ್ರ ಸಶಸ್ತ್ರ ಪಡೆ, ರಕ್ಷಣಾ ಸಾರ್ವಜನಿಕ ವಲಯದ ಉದ್ಯಮ, ನಾಗರಿಕ ವಿಮಾನಯಾನ, ಸಾರ್ವಜನಿಕ ಉದ್ಯಮಗಳು, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ, ರಾಜ್ಯಗಳ ಪೋಲಿಸ್ ಇಲಾಖೆ ಮುಂತಾದ ಇಲಾಖೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿನ ನೇಮಕಾತಿಗಳಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡಲಾಗುತ್ತಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ತರಬೇತಿ ಸಮಯದಲ್ಲಿ ಕರ್ತವ್ಯದಲ್ಲಿದ್ದು, ಹುತಾತ್ಮರಾದರೆ ಸುಮಾರು ಒಂದು ಕೋಟಿ ರೂ.ಗಳನ್ನು ಕೊಡಲಾಗುತ್ತದೆ. ತರಬೇತಿ ಸಮಯದಲ್ಲಿ ಕರ್ತವ್ಯದಲ್ಲಿ ಇಲ್ಲದಿದ್ದಾಗ ಹುತಾತ್ಮರಾದರೆ ಅವರಿಗೆ ಸುಮಾರು 50 ಲಕ್ಷ ರೂ.ಗಳ ವಿಮಾ ಸೌಲಭ್ಯ ದೊರೆಯಲಿದೆ. ತರಬೇತಿ ಸಮಯದಲ್ಲಿ ಹುತಾತ್ಮರಾದರೆ ಉಳಿದ ಸೇವಾ ಅವಧಿಯ ಮಾಸಿಕ ವೇತನ ಅವರ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಾಂತಯ್ಯಸ್ವಾಮಿ, ಪರಮೇಶ್ವರ್ ಶಿವಗೊಂಡ್, ರಾಜೇಂದ್ರ ಬಿರಾದಾರ್ ಮುಂತಾದವರು ಉಪಸ್ಥಿತರಿದ್ದರು.