ಸ್ವಾತಂತ್ರ್ಯ ಚಳುವಳಿಗೆ ನಾಂದಿ ಹಾಡಿದ ಮಂಗಲ ಪಾಂಡೆ
ಕಲಬುರಗಿ:ಜು.19: ವ್ಯಾಪರಕ್ಕಾಗಿ ಭಾರತಕ್ಕೆ ಆಗಮಿಸಿದ ಬ್ರೀಟಿಷರು ಒಡೆದಾಳುವ ನೀತಿಯ ಮೂಲಕ ಸುಮಾರು 250 ವರ್ಷಗಳ ಕಾಲ ಆಡಳಿತ ಮಾಡಿ ದೇಶವನ್ನು ದಾಸ್ಯಕ್ಕೀಡು ಮಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಹೋರಾಟ ಮಾಡಿದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಥಮ ಬಾರಿಗೆ ಧ್ವನಿ ಎತ್ತುವ ಮೂಲಕ ಸ್ವಾತಂತ್ರ್ಯ ಚಳುವಳಿಗೆ ನಾಂದಿ ಹಾಡಿದ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಮಂಗಲ ಪಾಂಡೆಯವರ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ಮಂಗಲ ಪಾಂಡೆಯವರ 197ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಮಂಗಲ ಪಾಂಡೆ ಇತಿಹಾಸದಲ್ಲಿ ಅಜರಾಮರವಾಗಿದ್ದಾರೆ. ಅವರಲ್ಲಿರುವ ಅಪ್ಪಟ ದೇಶಭಕ್ತಿ ಇಂದಿನ ಎಲ್ಲಾ ಯುವಕರಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಸಂಸ್ಥೆಯ ಶಿಕ್ಷಕರಾದ ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಪೂಜಾ ಜಮಾದಾರ, ಪ್ರಮುಖರಾದ ಶಶಾಂಕ್, ಸುದರ್ಶನ್, ಮಲ್ಲಿಕಾರ್ಜುನ, ಅಭಿಷೇಕ, ವಿಶ್ವ ಸೇರಿದಂತೆ ಇನ್ನಿತರರಿದ್ದರು.