ಮಣ್ಣಿನ ಕಣಗಳನ್ನು ನಿಮ್ಮ ರಕ್ತ ಕಣಗಳಂತೆ ಸಂರಕ್ಷಿಸಿ: ಕುಲಪತಿ ಡಾ. ಪಿ.ಎಲ್. ಪಾಟೀಲ
ವಿಜಯಪುರ,ಜು.19:ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಇಚಿಡಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರ ಸಹಯೋಗದಲ್ಲಿ “ಕೃಷಿ ವಿಜ್ಞಾನಿಗಳ ನಡೆ ರೈತರ ಕಡೆಗೆ” ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ‘ಲಿಂಬೆ ಮತ್ತು ಕಬ್ಬು ಬೆಳೆಗಳ ವಿಚಾರ ಸಂಕೀರ್ಣ’ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಧಾರವಾಡ ಕೃಷಿ ವಿವಿ, ಕುಲಪತಿ ಡಾ. ಪಿ. ಎಲ್. ಪಾಟೀಲ ಉದ್ಘಾಟಿಸಿ ಮಾತನಾಡಿ, ಮಣ್ಣು ಅಮೂಲ್ಯವಾದ ಸಜೀವ ವಸ್ತು. ಮಣ್ಣು ಮತ್ತು ನೀರನ್ನು ಸಂರಕ್ಷಿಸಬೇಕಾದುದು ರೈತರ ಆದ್ಯ ಕರ್ತವ್ಯವಾಗಿದೆ ಎಂದರು. ಈ ಭಾಗದಲ್ಲಿ ರೈತರು ಕೃಷಿ ಬೆಳೆಗಳ ಜೊತೆಗೆ ತೋಟಗಾರಿಕೆ ಬೆಳೆ ಅದರಲ್ಲೂ ಲಿಂಬೆ ಬೆಳೆಯನ್ನು ವಿಶೇಷವಾಗಿ ಬೆಳೆಯುತ್ತಿದ್ದಾರೆ. ಲಿಂಬೆ ಬೆಳೆಯ ಸಂಶೋಧನೆ ಮತ್ತು ಅಭಿವೃದ್ಧಿಗೋಸ್ಕರ ಇಂಡಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೂರು ಕೋಟಿ ವೆಚ್ಚದ ಕಟ್ಟಡ ಮತ್ತು ಇನ್ನಿತರ ಸಾಮಗ್ರಿಗಳನ್ನು ವ್ಯವಸ್ಥೆಮಾಡಲಾಗುತ್ತಿದೆ. ಇದರಿಂದಾಗಿ ಲಿಂಬೆಗೆ ಹೆಚ್ಚಿನ ಸ್ಥಾನಮಾನ ಬರಲು ಗುಣಮಟ್ಟದ ಲಿಂಬೆ ಉತ್ಪಾದನೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿ ನೀಡಲಾಗುವುದು ಎಂದರು.
ರೈತರ ಮಕ್ಕಳಿಗೆ ಕೃಷಿ ಪದವಿ ವ್ಯಾಸಂಗ ಮಾಡಲು ವಿಫುಲ ಅವಕಾಶಗಳಿವೆ. ತಮ್ಮ ಕುಟುಂಬದಲ್ಲಿರುವ ಒಬ್ಬರನ್ನು ಕೃಷಿ ಪದವೀಧರರನ್ನಾಗಿ ಮಾಡಿ ಅವರಿಂದ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬೇಕು. ರೈತರಿಗೆ ಕೃಷಿ ವಿಜ್ಞಾನ ಕೇಂದ್ರದಿಂದ ಕಾಲ ಕಾಲಕ್ಕೆ ತರಬೇತಿ, ಕ್ಷೇತ್ರ ಭೇಟಿ ಮೂಲಕ ರೈತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದರು.
ವಿಸ್ತರಣಾ ನಿರ್ದೇಶಕ ಡಾ. ಎಸ್. ಎಸ್. ಅಂಗಡಿ ಮಾತನಾಡಿ, ರೈತರು ವಿಜ್ಞಾನಿಗಳಂತೆ ವಿಚಾರ ಮಾಡಬೇಕು. ವ್ಯಾಪಾರಿಯಂತೆ ವ್ಯವಹಾರ ಮಾಡಿ ಲಾಭ ಗಳಿಸಬೇಕೆಂದರು. ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಒಂದರಲ್ಲಿ ನಷ್ಟವಾದರೂ ಇನ್ನೊಂದರಲ್ಲಿ ಲಾಭ ಪಡೆಯಬಹುದಾಗಿದೆ ಎಂದು ಹೇಳಿದರು.
ಸಂಶೋಧನಾ ನಿರ್ದೇಶಕÀ ಡಾ. ಬಿ. ಡಿ. ಬಿರಾದಾರ ಮಾತನಾಡಿ, ಕೃಷಿಯಲ್ಲಿ ಅನೇಕ ಅನ್ವೇಷಣೆಗಳು ಆಗುತ್ತಿದ್ದು, ಅವುಗಳನ್ನು ರೈತರು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು. ಆಯಾ ಭಾಗಕ್ಕೆ ಸೂಕ್ತವಾದ ತಳಿ ಆಯ್ಕೆ ಮಾಡಿಕೊಳ್ಳಬೇಕು. ತಜ್ಞರ ಸಲಹೆ ಪಡೆದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಆದಾಯ ದ್ವಿಗುಣಗೊಳಿಸಿದ 80 ರೈತರಿಗೆ ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಲಾಯಿತು. ಮಹಿಳೆಯರಿಗೆ ಕೈತೋಟ ಮಾಡಲು ತರಕಾರಿ ಕಿಟ್ ವಿತರಿಸಲಾಯಿತು. ನಂತರ ಲಿಂಬೆ ಮತ್ತು ಕಬ್ಬು ಬೆಳೆಯ ಕುರಿತು ವಿಚಾರ ಸಂಕಿರಣ ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸೋಮಯ್ಯ ಎಸ್. ಚಿಕ್ಕಪಟ್ಟ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಶಿವಯೋಗಪ್ಪ ನೇದಲಗಿ, ಬೀರಪ್ಪ ಕಲ್ಯಾಣಿ, ಸುಶ್ಮಿತಾ ಕುಂಬಾರ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ, ಡಾ. ಶಿವಶಂಕರಮೂರ್ತಿ, ಡಾ. ಎಸ್. ಎಮ್. ವಸ್ತ್ರದ, ಡಾ. ಸಂಜಯ ಪಾಟೀಲ, ಡಾ. ಹೀನಾ ಎಮ್. ಎಸ್., ಡಾ. ಬಾಲಾಜಿ ನಾಯಕ, ಡಾ. ಪ್ರಸಾದ ಎಮ್. ಜಿ., ಪ್ರೇಮಚಂದ ಯು., ಇಲಾಖೆಯ ಅಧಿಕಾರಿಗಳಾದ ರಾಹುಲ್ ಭಾವಿದೊಡ್ಡಿ, ಚಂದ್ರಕಾಂತ ಪವಾರ, ಆನಂದ, ಡಾ. ಪ್ರಕಾಶ ಜಿ., ಪ್ರಗತಿಪರ ರೈತರಾದ ಎಸ್. ಟಿ. ಪಾಟೀಲ, ರಾಜಶೇಖರ ನಿಂಬರಗಿ, ಶಿವರಾಜ ಪಾರಗೊಂಡ, ಶಿವಾನಂದ ಕುಂಬಾರ ಸೇರಿದಂತೆ ಸಾಲೋಟಗಿ ಹಾಗೂ ಸುತ್ತಲಿನ ಗ್ರಾಮಗಳ ರೈತರು ಭಾಗವಹಿಸಿದ್ದರು.