ಖಾಸ್ಗತೇಶ್ವರ ಮಠದಲ್ಲಿ ಗೋಪಾಲ ಕಾವಲಿ
ತಾಳಿಕೋಟೆ: ಜು.19: ಸ್ಥಳೀಯ ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೆ ಹಾಗೂ ರಥೋತ್ಸವ ಅಂಗವಾಗಿ ಗುರುವಾರರಂದು ನಸುಕಿನ ಜಾವ 5-30 ಕ್ಕೆ ಅಸಂಖ್ಯಾತ ಭಕ್ತ ಸಮೂಹದ ಸಮ್ಮುಖದಲ್ಲಿ ಗೋಪಾಲ ಕಾವಲಿ(ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮವು ಭಕ್ತಿ ಭಾವದೊಂದಿಗೆ ಜರುಗಿತು.
ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಕಳೆದ ಜೂಲೈ 11 ರಿಂದ ನಡೆಸಿಕೊಂಡು ಬರಲಾದ ಸಪ್ತ ಭಜನಾ ಕಾರ್ಯಕ್ರಮವು ಗೋಪಾಲಕಾವಲಿ(ಮೊಸರುಗಡಿಗೆ) ಒಡೆಯುವದರ ಮೂಲಕ ಇಂದು ಮಂಗಲಗೊಂಡಿತು. ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಘನ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ನಸುಕಿನ ಜಾವ 4 ಘಂಟೆಗೆ ಭವ್ಯ ಪ್ರಭಾತ ಪೇರಿಯೊಂದಿಗೆ ಧ್ವಜದ ಮೆರವಣಿಗೆ ನಡೆಯಿತಲ್ಲದೇ ಶ್ರೀ ಮಠದ ಪ್ರಾಂಗಣದಲ್ಲಿ ಕಟ್ಟಲಾದ ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮವನ್ನು ನಸುಕಿನ 5-30 ಘಂಟೆಗೆ ಶ್ರೀ ಖಾಸ್ಗತೇಶ್ವರ ಮಠದ ವೇ|| ಮಾಹಾಂತಯ್ಯ ವಿರಕ್ತಮಠ ಅವರು ನೆರವೇರಿಸಿದರು.
ಗೋಪಾಲ ಕಾವಲಿಯ ವಿಶೇಷ :-
ಈ ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತಾಧಿಗಳ ಮೇಲೆ ಮೊಸರು, ಹಾಲು, ಜೇನುತುಪ್ಪ ಹಾಗೂ ಇನ್ನಿತರ ಒಳಗೊಂಡ ಅಮೃತ ತುಂಬಿದ ಗಡಿಗೆ ಒಡೆದ ನಂತರ ಕೆಳಗೆ ನಿಂತ ಭಕ್ತಾಧಿಗಳ ಮೈಮೇಲೆ ಬಿದ್ದರೆ ಜೀವನ ಪಾವನಮಯವಾಗುತ್ತದೆ ಮತ್ತು ಒಡೆದ ಗಡಿಗೆಯ ಚೂರುಗಳಾಗಲಿ ಅಥವಾ ಗಡಿಗೆಯ ಜೊತೆಗಿದ್ದ ಹೂ ಇನ್ನಿತರ ಪೂಜಾ ಸಾಮಗ್ರಿಗಳಾಗಲಿ ಕೆಳಗೆ ನಿಂತ ಭಕ್ತರಿಗೆ ದೊರೆತರೆ ಮನೆಯಲ್ಲಿ ಸದಾ ಹಾಲು, ಹೈನು ಹೆಚ್ಚುವದರೊಂದಿಗೆ ಸಂಪತ್ಬರಿತವಾಗಿ ಬಡತನವೆಂಬುದು ನಿವಾರಣೆಯಾಗಿ ಶ್ರೀಮಂತಿಕೆತನ ಹೆಚ್ಚಿಸುತ್ತದೆ ಎಂಬುದು ಹಿರಿಯರ ಮಾತು. ಅದರ ಜೊತೆಗೆ ಭಕ್ತರಿಗೆ ಚರ್ಮ ರೋಗ ಇನ್ನಿತರ ಕಾಯಿಲೆಗಳು ಇದ್ದರೂ ಕೂಡಾ ಅದು ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆ.
ನಂಬಿದ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಈ ಹಿಂದಿನಿಂದಲೂ ಕಿಕ್ಕಿರಿದು ಸೇರಿದಂತೆ ಈ ಸಲವು ಈ ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದವನ್ನು ದೊರಕಿಸಿಕೊಳ್ಳಲು ಜೀವದ ಹಂಗು ತೊರೆದು ಗದ್ದಲಮಯ ವಾತಾವರಣದಲ್ಲಿಯೂ ಭಕ್ತ ಸಮೂಹ ಓಂ ನಮಃ ಶಿವಾಯ ಎಂಬ ನಾಮಾಂಕಿತದ ಭಕ್ತಿಯನ್ನು ಶ್ರೀ ಖಾಸ್ಗತನಿಗೆ ಅರ್ಪಿಸಿದರು.
ಈ ಹಿಂದೆ ಶ್ರೀಖಾಸ್ಗತರು ಪಂಡರಪೂರದ ಶ್ರೀ ವಿಠ್ಠಲ ಜಾತ್ರೋತ್ಸವಕ್ಕೆ ತೆರಳಿದಾಗ ಆಷಾಢ ಏಕಾದಶಿ ದಿನದಂದು ವಿಠ್ಠಲ ದೇವಸ್ಥಾನದಲ್ಲಿ ನೆರವೇರಿಸಲಾಗುತ್ತಿರುವ ಗೋಪಾಲ ಕಾವಲಿ ಶ್ರೀಮಠದಲ್ಲಿಯೂ ಏರ್ಪಡಿಸಿದರೆ ಭಕ್ತಾದಿಗಳ ಜೀವನ ಪಾವನವಾಗುತ್ತದೆ ಎಂದು ಶ್ರೀ ಖಾಸ್ಗತರು ತಮ್ಮ ಸ್ವಯಂ ಇಚ್ಚೆಯಿಂದ ಗೋಪಾಲಕಾವಲಿ(ಮೊಸರುಗಡಿಗೆ) ಒಡೆಯುವ ಕಾರ್ಯಕ್ರಮ ಹಮ್ಮಿಕೊಂಡರೆಂದು ಹೇಳಲಾಗುತ್ತದೆ.
ಅದರಂತೆ ಈ ಹಿಂದಿನಿಂದ ನಡೆಸಿಕೊಂಡು ಬರಲಾದ ಈ ಕಾರ್ಯಕ್ರಮದಂತೆ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಜಾತ್ರೆಯ ಉತ್ಸವದ ಸಮಯದಲ್ಲಿ ಈ ಕಾರ್ಯಕ್ರಮ ನಡೆಸಿಕೊಂಡು ಈಗಲೂ ಬರಲಾಗುತ್ತಿದೆ. ಈ ಹಿಂದಿನ ಸಾಂಪ್ರದಾಯದಂತೆ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಸಮಯದಲ್ಲಿ ರಥೋತ್ಸವಕ್ಕೆ ಒಂದು ದಿನ ಮೊದಲು ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮವನ್ನು ಈಗಲೂ ಮುಂದುವರೆಸಿಕೊಂಡು ಭಕ್ತಾಧಿಗಳ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅನುವು ಮಾಡಿಕೊಡುತ್ತಿರುವುದು ವಿಶೇಷ.
ಅದರಂತೆ ಈ ಸಲವೂ ಗುರುವಾರರಂದು ನಸುಕಿನ ಜಾವ ಜರುಗಿದ ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮದಲ್ಲಿ ಮುಂಬೈ, ಪುಣೆ, ಗೋವಾ, ಹೈದ್ರಾಬಾದ, ಬೆಂಗಳೂರ, ಹುಬ್ಬಳ್ಳಿ, ಗುಲಬರ್ಗಾ, ಒಳಗೊಂಡು ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಸಾವಿರಾರು ಜನ ಭಕ್ತ ಸಮೂಹ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರು, ಹಾಗೂ ಮಠದ ಉಸ್ತುವಾರಿ ವೇ|| ಮುರುಘೇಶ ವಿರಕ್ತಮಠ, ವೇ|| ವಿಶ್ವನಾಥ ವಿರಕ್ತಮಠ, ಅನೇಕ ಭಕ್ತಾಧಿಗಳು ಪಾಲ್ಗೊಂಡಿದ್ದರು.