ಕನ್ನಡ ಕಟ್ಟುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ
ಭಾಲ್ಕಿ:ಜು.19:ಕನ್ನಡ ಕಟ್ಟುವ, ಕನ್ನಡಾಭಿಮಾನ ಮೂಡಿಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು. ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ನಮ್ಮ ಕರ್ನಾಟಕ ಸೇನೆಯ ನೂತನ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್ ಅವರನ್ನು ಗುರುವಾರ ಸನ್ಮಾನಿಸಿ, ಆಶೀರ್ವದಿಸಿ ಅವರು ಮಾತನಾಡಿದರು.
ಕನ್ನಡ ನೆಲ, ಜಲ, ಗಡಿ ವಿಷಯ ಬಂದಾಗ ಎಲ್ಲರೂ ಕೈಜೋಡಿಸಬೇಕು. ಒಳ್ಳೆಯ ಉದ್ದೇಶಕ್ಕೆ ಹೋರಾಡುವ ಕನ್ನಡಪರ ಸಂಘಟನೆಗಳಿಗೆ ಸದಾ ಬೆಂಬಲಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ನಮ್ಮ ಕರ್ನಾಟಕ ಸೇನೆ ನೂತನ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್ ಮಾತನಾಡಿ, ತಾಲೂಕಿನಲ್ಲಿ ಹಲವು ವರ್ಷಗಳಿಂದ ಕನ್ನಡದ ಸೇವೆ ಮಾಡಿಕೊಂಡು ಬಂದಿದ್ದೇನೆ. ಅನ್ಯಾಯದ ವಿರುದ್ಧ ಹೋರಾಡುವ ಪ್ರಯತ್ನ ಮಾಡಿದ್ದೇನೆ. ನನ್ನ ಕನ್ನಡದ ಅಳಿಲು ಸೇವೆ ಗುರುತಿಸಿ ನಮ್ಮ ಕರ್ನಾಟಕ ಸೇನೆ ಸಂಘಟನೆ ಜಿಲ್ಲಾಧ್ಯಕ್ಷನ್ನಾಗಿ ಆಯ್ಕೆ ಮಾಡಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಜಿಲ್ಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಚಂದು ಸಂಪಂಗೆ, ಲೋಕೇಶ ಭೂರೆ, ಬಸವರಾಜ ಕಾರಬಾರಿ, ಸಂತೋಷ ಹಡಪದ, ಸುಧಾಕರ ಸೂರ್ಯವಂಶಿ, ಲೋಕೇಶ ಪಾಟೀಲ್, ಕಾಶಿನಾಥ ಮಲ್ಕಾಪೂರೆ, ವೀರೇಶ ಸಾವಳೆ ಸೇರಿದಂತೆ ಹಲವರು ಇದ್ದರು.