ಸಮಸ್ಯೆಗಳ ನಿವಾರಣೆಗೆ ತ್ವರಿತಗತಿಯಲ್ಲಿ ಕ್ರಮ: ಪುರಸಭೆ ಮುಖ್ಯಾಧಿಕಾರಿ
ಅಫಜಲಪುರ:ಜು.19: ಪುರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಾರ್ಡುಗಳಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಜುಲೈ 18 ರಿಂದ 24ರ ವರೆಗೆ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನೆಲೆ ಗುರುವಾರದಂದು ವಾರ್ಡ್ ನಂ. 1, 2, 3, 4, 5 ರಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿ ಬಡಾವಣೆಯ ನಿವಾಸಿಗಳಿಂದ ಅರ್ಜಿ ಪಡೆದು ಪರಿಶೀಲನೆ ನಡೆಸಲಾಯಿತು.
ಬಳಿಕ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ ಅವರು, ಬೀದಿ ವಿದ್ಯುತ್ ದೀಪ ಅಳವಡಿಕೆ, ತ್ಯಾಜ್ಯ ವಿಲೇವಾರಿ, ಸಾಮೂಹಿಕ ಶೌಚಾಲಯ, ಸ್ವಚ್ಛತೆ ಸೇರಿದಂತೆ ಹಲವು ಕೆಲಸ ಕಾಮಗಾರಿಗಳನ್ನು ಶೀಘ್ರದಲ್ಲೇ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹೀಗಾಗಿ ಸಾರ್ವಜನಿಕರು ಮತ್ತು ಸದಸ್ಯರ ಸಹಕಾರ ಇರಲಿ ಎಂದ ಅವರು ಜುಲೈ 19 ರ ಇಂದು ವಾರ್ಡ್ ಸಂಖ್ಯೆ 6, 7, 8, 9 ರಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 5 ರ ವರೆಗೆ ಜನಸ್ಪಂದನ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರು ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಬಸವರಾಜ ಶಿವಪೂಜೆ, ಸಂಜಯಕುಮಾರ, ಗಾಯತ್ರಿ ಸಿ.ಎಂ, ಪ್ರೇಮಾವತಿ ರಾಜಾನವರ್ ಸೇರಿದಂತೆ ಆಯಾ ವಾರ್ಡಿನ ಸದಸ್ಯರು ಹಾಗೂ ಬಡಾವಣೆಯ ನಿವಾಸಿಗಳು ಹಾಜರಿದ್ದರು.