ವಿದ್ಯಾಕಾಶಿ ಮಾಡುವತ್ತ ಧಾರವಾಡ ಜಿಲ್ಲಾಡಳಿತದ ಚಿತ್ತ
ಧಾರವಾಡ,ಜು.19: ವಿದ್ಯಾಕಾಶಿ ಎಂದೇ ಕರೆಸಿಕೊಳ್ಳುವ ಧಾರವಾಡ ಜಿಲ್ಲೆಯನ್ನು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ನಂಬರ ಒನ್ ಸ್ಥಾನಕ್ಕೆ ತರುವ ಮೂಲಕ ಹೆಸರಿಗೆ ತಕ್ಕಂತೆ ವಿದ್ಯಾಕಾಶಿ ಮಾಡುವ ಪ್ರಯತ್ನವನ್ನು ಜಿಲ್ಲಾಡಳಿತ ಆರಂಭಿಸಿದೆ. ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರು, ಪರೀಕ್ಷಾ ತರಬೇತಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈ ಜೊಡಿಸಿದ್ದು, ಎಲ್ಲರ ಸಹಕಾರ, ಪ್ರಯತ್ನದಿಂದ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿದ್ಯಾಕಾಶಿ ಮಾಡುವತ್ತ ಧಾರವಾಡ ಜಿಲ್ಲಾಡಳಿತದ ಚಿತ್ತ ಎಂಬ ಸಂಕಲ್ಪದೊಂದಿಗೆ ಧಾರವಾಡದ ಹಿರಿಯ ಶಿಕ್ಷಣ ತಜ್ಞರು, ಖಾಸಗಿ ತರಬೇತಿ ಸಂಸ್ಥೆಗಳ ಮುಖ್ಯಸ್ಥರು, ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಕುರಿತು ಸಮಾಲೋಚನೆ ಹಾಗೂ ಕ್ರಿಯಾಯೋಜನೆ ರೂಪಿಸುವದಕ್ಕಾಗಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕಳೆದ ವರ್ಷದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 72.67 ರಷ್ಟು ಸಾಧನೆ ಮಾಡುವ ಮೂಲಕ ಧಾರವಾಡ ಜಿಲ್ಲೆ 22ನೇ ಸ್ಥಾನ ಪಡೆದಿದೆ. ಜಿಲ್ಲೆಯ 495 ಪ್ರೌಢಶಾಲೆಗಳ ಪೈಕಿ ಮೂರು ಶಾಲೆಗಳು ಶೂನ್ಯ ಸಂಪಾದನೆ ಮಾಡಿದ್ದು, 30 ಶಾಲೆಗಳು ಶೇ. 100 ರಷ್ಟು ಸಾಧನೆ ಮಾಡಿವೆ ಎಂದು ಅವರು ಹೇಳಿದರು.
ಇಲ್ಲಿಯವರೆಗೆ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳು ಸೇರಿ ಪ್ರಸಕ್ತ ವರ್ಷ ಒಟ್ಟು 32,870 ವಿದ್ಯಾರ್ಥಿಗಳು ಹತ್ತನೇ ವರ್ಗಕ್ಕೆ ಪ್ರವೇಶ ಪಡೆದಿದ್ದಾರೆ ಮತ್ತು 8ನೇ ವರ್ಗಕ್ಕೆ 33,494, 9ನೇ ವರ್ಗಕ್ಕೆ 33,218 ಮಕ್ಕಳು ಸೇರಿ ಪ್ರೌಢಶಾಲೆಗಳಿಗೆ ಒಟ್ಟು 99,582 ಮಕ್ಕಳು ಇಲ್ಲಿವರೆಗೆ ಪ್ರವೇಶ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರಸಕ್ತ ವರ್ಷ 10 ನೇ ತರಗತಿಗೆ ದಾಖಲಾಗಿರುವ ಮಕ್ಕಳಲ್ಲಿನ ಕಲಿಕೆಯ ಗತಿಯನ್ನು ಗುರುತಿಸಲು ಸೇತು ಬಂಧು ಕಾರ್ಯಕ್ರಮದಡಿ ಪರೀಕ್ಷೆಯನ್ನು ಜರುಗಿಸಲಾಗಿತ್ತು. ಒಟ್ಟು ಹತ್ತನೇ ವರ್ಗದ ಮಕ್ಕಳ ಪೈಕಿ 8,237 ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿಧಾನಗತಿಯಲ್ಲಿದ್ದು, ಹಿಂದುಳಿದಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ, ಅವರನ್ನು ಸಾಮಾನ್ಯ ವಿದ್ಯಾರ್ಥಿಗಳಂತೆ ಸುಧಾರಿಸಿ ಈ ಸಲದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವ ಚಾಲೆಂಜ್ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಪರಿಣಿತರು, ಶಾಲಾ ಅಭಿವೃದ್ಧಿ ಸಮಿತಿಯವರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಮಕ್ಕಳಲ್ಲಿ ಓದುವ ಭರವಸೆ ಮೂಡಿಸುವ ಅಗತ್ಯವಿದೆ. ಓದಿನಲ್ಲಿ ಮಕ್ಕಳು ಹಿಂದುಳಿಯಲು ಶಿಕ್ಷಕರು ಮಾತ್ರ ಕಾರಣರಲ್ಲ, ಅದರ ಹೊಣೆಯನ್ನು ಪಾಲಕರು ಸೇರಿದಂತೆ ಎಲ್ಲರೂ ವಹಿಸಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು, ಅವರ ಉತ್ತಮ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಅವರು ಹೇಳಿದರು.
ಪ್ರತಿ ಮಗು ಶಾಲೆಯಲ್ಲಿರಬೇಕು. ಈ ಕುರಿತು ಶಿಕ್ಷಣ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಮಕ್ಕಳು ಶಾಲೆಗೆ ದಾಖಲಾಗಿಯೂ ಕ್ಲಾಸ್‍ಗೆ ಬರದಿದ್ದರೆ ಶಿಕ್ಷಕರನ್ನು ಮತ್ತು ಶಾಲಾ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪ್ರತಿ ವಿದ್ಯಾರ್ಥಿಯ ಕಲಿಕೆಯ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸಬೇಕೆಂದು ಅವರು ತಿಳಿಸಿದರು.
ಕಲಿಕೆಯಲ್ಲಿ ನಿಧಾನಗತಿಯಲ್ಲಿರುವ ಮಕ್ಕಳನ್ನು ಗುರುತಿಸಿ ಎರಡಮೂರು ಜನರಿಗೆ ಒರ್ವ ಶಿಕ್ಷಕರನ್ನು ಮತ್ತು ಅಂತಹ ಒಂದು ಶಾಲೆಗೆ ಒರ್ವ ನೊಡಲ್ ಅಧಿಕಾರಿಯನ್ನು ನೇಮಿಸಲು ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬೆಸ್ಟ ಟೀಚರ್ ಪುರಸ್ಕಾರ: ನಿಧಾನಗತಿಯ ಮಕ್ಕಳಲ್ಲಿನ ಓದು ಬರಹದಲ್ಲಿ ಬದಲಾವಣೆ ತರುವ, ಉತ್ತಮ ಪ್ರಗತಿ ಸಾಧಿಸುವ ಶಿಕ್ಷಕರಿಗೆ ಬೆಸ್ಟ್ ಟೀಚರ್ ಪುರಸ್ಕಾರ ನೀಡಿ, ಜಿಲ್ಲಾಡಳಿತದಿಂದ ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.